ಶಿವಮೊಗ್ಗ: ಪ್ರತಿಭಟನೆಯ ವೇಳೆ ಮಹಿಳಾ ಎಎಸ್ ಐ ಒಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಕೋಟೆ ಪೊಲೀಸ್ ಠಾಣೆಯ ಎಎಸ್ಐ ಅಮೃತಾ ಬಾಯಿ ಅವರ 60 ಗ್ರಾಂ ತೂಕದ ಚಿನ್ನದ ಸರವನ್ನ ಚೋರರು ಎಗರಿಸಿದ್ದಾರೆ ಎನ್ನಲಾಗಿದೆ.
ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ವೇಳೆ ಎಎಸ್ಐ ಅಮೃತಾ ಬಾಯಿ ಅವರ ಕೊರಳಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿದ್ದು, ಪ್ರತಿಭಟನೆ ಮುಗಿದ ಬಳಿಕ ನೋಡಿಕೊಂಡಾಗ ಚಿನ್ನದ ಸರ ನಾಪತ್ತೆಯಾಗಿರುವ ಕುರಿತು ಅಮೃತಾ ಬಾಯಿಯವರಿಗೆ ತಿಳಿದು ಬಂದಿದೆ.
ಈ ವೇಳೆ ಕಣ್ಣೀರು ಹಾಕುತ್ತಲೇ ಎಎಸ್ಐ ಅಮೃತಾ ಬಾಯಿ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸರು ನಿರತರಾಗಿದ್ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ. ಘಟನೆ ನಡೆದ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು. ಪ್ರತಿಭಟನೆಯ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಮಾಧ್ಯಮಗಳ ವಿಡಿಯೋ ಕ್ಲಿಪ್ಪಿಂಗ್ ಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.










