ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಮನೆಯ ಬಳಿ ನಿಂತಿದ್ದ ವೇಳೆ ಹೃದಯ್ ಎಂಬ ಬಾಲಕನ ಮೇಲೆ ದಿಢೀರ್ ದಾಳಿ ನಡೆದಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಆತನನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. ಈ ದಾಳಿ ಲಿಂಗದಹಳ್ಳಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೇವಲ ವಾರದ ಹಿಂದಷ್ಟೇ ಇದೇ ತಾಲ್ಲೂಕಿನಲ್ಲಿ 5 ವರ್ಷದ ಬಾಲಕಿ ಚಿರತೆ ದಾಳಿಗೆ ಬಲಿಯಾಗಿದ್ದ ಘಟನೆ ನಡೆದಿತ್ತು. ಆ ನೋವು ಜನಮಾನಸದಿಂದ ಮಾಸುವ ಮುನ್ನ ಮತ್ತೆ ಮತ್ತೊಂದು ದಾಳಿ ಸಂಭವಿಸಿರುವುದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.
ಅರಣ್ಯ ಸಿಬ್ಬಂದಿ ಮತ್ತು ಪೊಲೀಸರು ಪ್ರದೇಶದಲ್ಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.










