12.7 C
Munich
Home News ಅಕ್ಕಿ ಅಕ್ರಮ‌ ದಾಸ್ತಾನು: ನಾಲ್ವರ ವಿರುದ್ಧ ದಾಖಲಾಯ್ತು ಎಫ್ ಐಆರ್

ಅಕ್ಕಿ ಅಕ್ರಮ‌ ದಾಸ್ತಾನು: ನಾಲ್ವರ ವಿರುದ್ಧ ದಾಖಲಾಯ್ತು ಎಫ್ ಐಆರ್

ಸಕಲೇಶಪುರ: ಬಡವರಿಗೆ ತಲುಪಬೇಕಾಗಿದ್ದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದನ್ನು ಅಧಿಕಾರಿಗಳು ಪತ್ತೆಹಚ್ಚಿರುವ ಘಟನೆ ತಾಲೂಕಿನ ಬಾಳುಪೇಟೆ ಗ್ರಾಮದ ಜಮ್ಮನಹಳ್ಳಿಯಲ್ಲಿ ನಡೆದಿದೆ.

ತೀರ್ಥಕುಮಾರ ಎಂಬುವರ ಗೋದಾಮಿನಲ್ಲಿ ಅಕ್ರಮವಾಗಿ 660 ಚೀಲ ಪಡಿತರ ಅಕ್ಕಿ ಸಂಗ್ರಹಿಸಿ ಇಟ್ಟಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಆಹಾರ ಶಿರಸ್ತೇದಾರ ದ್ರಾಕ್ಷಾಯಿಣಿ ನಡೆಸಿದ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.

ಘಟನೆಯ ವಿವರ:

ಹಾಸನದ ಕೈಗಾರಿಕಾ ಪ್ರದೇಶದಲ್ಲಿದ್ದ ಗೋದಾಮಿನಿಂದ 660 ಚೀಲ ಅಕ್ಕಿಯನ್ನು ಪ್ರಮೋದ್ ಕುಮಾರ ಎಂಬುವರ ರಂಗಸ್ವಾಮಿ ಟ್ರಾನ್ಸ್‌ಪೋರ್ಟ್ಗೆ ಸೇರಿದ ಕೆಎ–19–ಸಿ–7712 ಮತ್ತು ಕೆಎ–19–ಡಿ–9533 ನಂಬರಿನ ಎರಡು ಲಾರಿಗಳಿಗೆ ಬುಧವಾರ ಲೋಡ್ ಮಾಡಲಾಗಿತ್ತು. ಅಕ್ಕಿಯನ್ನು ಸಕಲೇಶಪುರದ ಗೋದಾಮಿಗೆ ಸಾಗಿಸಲು ಟ್ರಿಪ್ ಸೀಟ್‌ಗಳನ್ನು ನೀಡಲಾಗಿತ್ತು. ಆದರೆ, ಸಕಲೇಶಪುರಕ್ಕೆ ತಲುಪಿಸಬೇಕಿದ್ದ ಅಕ್ಕಿ ಚೀಲಗಳನ್ನು ಲಾರಿಗಳ ಚಾಲಕರು ಮೋಸ ಮಾಡುವ ಉದ್ದೇಶದಿಂದ ಮಾರ್ಗ ಮಧ್ಯೆ ಬಾಳುಪೇಟೆಯ ಜಮ್ಮನಹಳ್ಳಿ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದರು.

ರಂಗಸ್ವಾಮಿ ಟ್ರಾನ್ಸ್‌ಪೋರ್ಟ್ನ ಪ್ರಮೋದ್ ಕುಮಾರ, ಜಮ್ಮನಹಳ್ಳಿ ಸಹಕಾರ ಸಂಘದ ತೀರ್ಥಕುಮಾರ ಹಾಗೂ ಎರಡು ಲಾರಿಗಳ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದ್ರಾಕ್ಷಾಯಿಣಿ ಅವರು ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿದ್ದಾರೆ.

error: Content is protected !!