14.6 C
Munich
Home News ಚಿಕ್ಕಮಗಳೂರು: ಅನುಮಾನಾಸ್ಪದ ಲಿಂಕ್ ಕ್ಲಿಕ್‌ನಿಂದ ಮಹಿಳೆಯ ಬ್ಯಾಂಕ್ ಖಾತೆಯಿಂದ 10.65 ಲಕ್ಷ ರೂ. ಮಾಯ

ಚಿಕ್ಕಮಗಳೂರು: ಅನುಮಾನಾಸ್ಪದ ಲಿಂಕ್ ಕ್ಲಿಕ್‌ನಿಂದ ಮಹಿಳೆಯ ಬ್ಯಾಂಕ್ ಖಾತೆಯಿಂದ 10.65 ಲಕ್ಷ ರೂ. ಮಾಯ

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರ ಮೊಬೈಲ್‌ಗೆ ಬಂದ ಅನುಮಾನಾಸ್ಪದ .APK ಫೈಲ್‌ನ್ನು ಕ್ಲಿಕ್ ಮಾಡಿ ಇನ್‌ಸ್ಟಾಲ್ ಮಾಡಿಕೊಂಡ ಪರಿಣಾಮ, ಸೈಬರ್ ಖದೀಮರು ರಿಮೋಟ್ ಆಕ್ಸೆಸ್ ಪಡೆದು ಅವರ ಎರಡು ಬ್ಯಾಂಕ್ ಖಾತೆಗಳಿಂದ 10,65,899 ರೂಪಾಯಿಗಳನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ಮಹಿಳೆಯು ತನ್ನ ಎರಡು ಬ್ಯಾಂಕ್ ಖಾತೆಗಳ ಬ್ಯಾಲೆನ್ಸ್ ಪರಿಶೀಲಿಸಿದಾಗ, ಗಮನಕ್ಕೆ ಬಾರದ ರೀತಿಯಲ್ಲಿ ಹಣ ಕಡಿತಗೊಂಡಿರುವುದು ಕಂಡುಬಂದಿತು. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ಪೇಟಿಎಂ ಆಪ್ ಮೂಲಕ ಗೇಮಿಂಗ್ ಆಪ್‌ಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಮಾಹಿತಿ ದೊರೆತಿದೆ. ಆದರೆ, ಮಹಿಳೆಯು ತನ್ನ ಮೊಬೈಲ್‌ನಲ್ಲಿ ಪೇಟಿಎಂ ಅಥವಾ ಯಾವುದೇ ಗೇಮಿಂಗ್ ಆಪ್ ಇನ್‌ಸ್ಟಾಲ್ ಮಾಡಿರಲಿಲ್ಲ. ಸೈಬರ್ ವಂಚಕರು .APK ಫೈಲ್ ಮೂಲಕ ಮೊಬೈಲ್‌ನ ಸಂಪೂರ್ಣ ಆಕ್ಸೆಸ್ ಪಡೆದು, ಪೇಟಿಎಂ ಆಪ್‌ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿ, ಜೂನ್ 24, 2025 ರಿಂದ ಆಗಸ್ಟ್ 10, 2025ರವರೆಗೆ ಹಂತಹಂತವಾಗಿ 10,65,899 ರೂಪಾಯಿಗಳನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಆಗಸ್ಟ್ 15, 2025 ರಂದು ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ಕೈಗೊಳ್ಳಲಾಗಿದೆ.

*ಜಿಲ್ಲಾ ಪೊಲೀಸರಿಂದ ವಿನಂತಿ*: ಸಾರ್ವಜನಿಕರು ಮೊಬೈಲ್‌ಗೆ ಬರುವ ಯಾವುದೇ ಅಪರಿಚಿತ ಅಥವಾ ಅನುಮಾನಾಸ್ಪದ .APK ಫೈಲ್‌ಗಳನ್ನು ಸೂಕ್ತ ಪರಿಶೀಲನೆ ಇಲ್ಲದೆ ಇನ್‌ಸ್ಟಾಲ್ ಮಾಡಿಕೊಳ್ಳಬಾರದು. ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ ಟೋಲ್ ಫ್ರೀ ಸಂಖ್ಯೆ 1930ಗೆ ಕರೆ ಮಾಡಿ, ಅಗತ್ಯ ಮಾಹಿತಿಯೊಂದಿಗೆ ದೂರು ದಾಖಲಿಸುವಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಕೋರಿದ್ದಾರೆ.

*ಗಮನಿಸಿ*: ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು, ಅನಾಮಿಕ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೊದಲು ಜಾಗರೂಕರಾಗಿರಿ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

error: Content is protected !!