ಜಾವಗಲ್‌: ಡಿಸೆಂಬರ್ 22ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ

An Alva's Cultural Glory program has been organized in Javagal village on December 22 (Monday) with the cooperation of the Alva's Nudisiri Virasat Unit, Gram Panchayat and the villagers of Javagal.

ಜಾವಗಲ್: ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ, ಗ್ರಾಮ ಪಂಚಾಯಿತಿ ಹಾಗೂ ಜಾವಗಲ್ ಗ್ರಾಮಸ್ಥರ ಸಹಕಾರದೊಂದಿಗೆ ಡಿಸೆಂಬರ್ 22ರಂದು (ಸೋಮವಾರ) ಜಾವಗಲ್ ಗ್ರಾಮದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಾವಗಲ್ ಶ್ರೀನಾಥ ಕ್ರೀಡಾಂಗಣದಲ್ಲಿ ಸಂಜೆ 5.45ಕ್ಕೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 350ಕ್ಕೂ ಹೆಚ್ಚು ಪ್ರತಿಭಾವಂತ ಕಲಾವಿದರು ಭಾಗವಹಿಸಲಿದ್ದು, ಭಾರತ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಅದ್ಭುತ ಪ್ರದರ್ಶನಗಳನ್ನು ನೀಡಲಿದ್ದಾರೆ.

ಈಗಾಗಲೇ ದೇಶ-ವಿದೇಶಗಳಲ್ಲಿ ಜನಮನ ಸೆಳೆದಿರುವ ಈ ಸಾಂಸ್ಕೃತಿಕ ವೈಭವ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದು ವಿಶೇಷ ಸಂತಸದ ವಿಷಯವಾಗಿದೆ.

ಸುಮಾರು 3 ಗಂಟೆ 30 ನಿಮಿಷಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಕಲಾತ್ಮಕ ಯೋಗ, ಅಷ್ಟಲಕ್ಷ್ಮೀ ಶಾಸ್ತ್ರೀಯ ನೃತ್ಯ, ಆಂಧ್ರದ ಜನಪದ ಬಂಜಾರ ನೃತ್ಯ, ಬಡಗುತಿಟ್ಟು ಯಕ್ಷಗಾನ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ ‘ವರ್ಷಧಾರೆ’, ಪುರುಲಿಯಾ ಸಿಂಹ ನೃತ್ಯ, ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ, ಬೊಂಬೆ ವಿನೋದಾವಳಿ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿಸಲಿವೆ.

ಈ ಕಾರ್ಯಕ್ರಮವು ವೀಕ್ಷಕರನ್ನು ಹೊಸ ಸಾಂಸ್ಕೃತಿಕ ಲೋಕಕ್ಕೆ ಕರೆದೊಯ್ಯಲಿದೆ ಎಂದು ಆಯೋಜಕರು ತಿಳಿಸಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರು, ಮಕ್ಕಳು, ವಯೋವೃದ್ಧರು ಸೇರಿದಂತೆ ಎಲ್ಲಾ ಸಾರ್ವಜನಿಕರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಆಗಮಿಸಿ ಕಾರ್ಯಕ್ರಮವನ್ನು ವೀಕ್ಷಿಸಬೇಕೆಂದು ಮನವಿ ಮಾಡಿದ್ದಾರೆ.

ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭವಾಗಲಿರುವುದರಿಂದ, ಕನಿಷ್ಠ 15 ನಿಮಿಷ ಮುಂಚಿತವಾಗಿ ಆಗಮಿಸಿ ಆಸನಗಳನ್ನು ಪಡೆದುಕೊಳ್ಳುವಂತೆ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಜಿಲ್ಲಾ ಸಂಚಾಲಕ ಜಾವಗಲ್ ಪ್ರಸನ್ನಕುಮಾರ್, ಜಾವಗಲ್ ಘಟಕದ ಅಧ್ಯಕ್ಷ ಜೆ.ಎಂ. ಅನಿಲ್ ಕುಮಾರ್ ಹಾಗೂ ಕಾರ್ಯದರ್ಶಿ ನೇರ್ಲಿಗೆ ಕರುಣಾಕರ್ ತಿಳಿಸಿದ್ದಾರೆ.

An Alva’s Cultural Glory program has been organized in Javagal village on December 22 (Monday) with the cooperation of the Alva’s Nudisiri Virasat Unit, Gram Panchayat and the villagers of Javagal.