ಹಾಸನ: ಗೋಮಾಳ ಜಮೀನು ತೆರವು ಖಂಡಿಸಿ ಸಾವಂತನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಹಾಸನ: ತಾಲೂಕಿನ ಸಾವಂತನಹಳ್ಳಿ ಬಳಿಯ ಗೋಮಾಳ ವಿಚಾರದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಅರಣ್ಯಾಧಿಕಾರಿಗಳು ಅನುಭೋಗದಲ್ಲಿರುವ ಗೋಮಾಳ ಜಮೀನನ್ನು ತರೆವುಗೊಳಿಸಲು ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳನ್ನು ಯಂತ್ರಗಳ ಸಹಾಯದಿಂದ ನಾಶಮಾಡಿರುವುದನ್ನು ಖಂಡಿಸಿ, ಬೆಳೆ ಹಾನಿ ಮಾಡಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹಾಗೂ ಬಡ ಕುಟುಂಬಗಳಿಗೆ ಸೂಕ್ತ ರಕ್ಷಣೆ, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ವಕೀಲ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಸಾವಂತನಹಳ್ಳಿ ಗ್ರಾಮದ ಸನಂ ೯೯ ರ ಗೋಮಾಳದ ಜಮೀನಿನಲ್ಲಿ ಸುಮಾರು ೪೦-೫೦ ವರ್ಷಗಳಿಗೂ ಮೇಲ್ಪಟ್ಟು ಹತ್ತಾರು ರೈತರು ಸಾಗುವಳಿ ಮಾಡುತ್ತಾ ಶಾಂತಿಯುತವಾಗಿ ಅನುಭವಿಸಿಕೊಂಡು ಬರುತ್ತಿದ್ದೆವು.

ಆದರೆ ಜಾಗದ ಸಂಬಂಧ ಮಂಜೂರಾತಿ ಪತ್ರ ಮತ್ತು ಖಾತಾ ಆದೇಶ ಹೊಂದಲು ಸಾಧ್ಯವಾಗದ ಕಾರಣ ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಅನುಭೋಗದಲ್ಲೇ ಇಲ್ಲದ ಬೇರೆಯವರು ತಮಗೆ ಮಂಜೂರಾಗಿದೆ ಎಂದು ನಕಲಿ ದಾಖಲಾತಿ ಸೃಷ್ಟಿಸಿಕೊಂಡು ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ನಾವು ಸದರಿ ಭೂಮಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದರೂ, ದಾಖಲಾತಿ ಲಭ್ಯವಿಲ್ಲ ಎಂದು ಹಿಂಬರಹ ನೀಡಿರುವ ಅಧಿಕಾರಿಗಳು, ಅದೇ ಗೋಮಾಳದ ಜಮೀನನ್ನು ಕಾನೂನುಬಾಹಿರವಾಗಿ ಅರ್ಹರಲ್ಲದವರಿಗೆ ಮಂಜೂರು ಮಾಡಿರುವುದಾಗಿ ಆದೇಶ ಮಾಡಿರುವುದು ಹೇಗೆ ಎಂದು ಪ್ರಶ್ನಿಸಿದರು. ಇದರಿಂದ ನಮಗೆ ಅನ್ಯಾಯವಾಗಿದೆ. ಇದರ ವಿರುದ್ಧ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಕಚೇರಿಗಳ ಎದುರು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದರೂ, ಯಾರಿಂದಲೂ ನ್ಯಾಯ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು.

ಇದರ ನಡುವೆ ಆ.೧ ರಂದು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಜಮೀನಿನಲ್ಲಿದ್ದ ಬೆಳೆ ನಾಶ ಮಾಡಿದ್ದಾರೆ. ಬೆಳೆ ಕಟಾವು ಮಾಡಿಕೊಳ್ಳಲು ಅವಕಾಶ ಕೇಳಿದರೂ ಕೊಡದೆ ಸರ್ವಾಧಿಕಾರಿಯಂತೆ ವರ್ತಿಸಿದರು ಎಂದು ಕಿಡಿ ಕಾರಿದರು. ಸದರಿ ಪ್ರಕರಣ ನ್ಯಾಯಾಲಯಲ್ಲಿರುವುದರಿಂದ ಅಂತಿಮ ತೀರ್ಮಾನ ಆಗುವವರೆಗೂ ಹಾಗೂ ನಮ್ಮ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಅನುಭೋಗದಲ್ಲಿರುವ ಗ್ರಾಮಸ್ಥರನ್ನು ಗೋಮಾಳದ ಜಮೀನಿನಿಂದ ತರೆವುಗೊಳಿಸಬಾರದು. ಅಲ್ಲೀವರೆಗೂ ಬಲವಂತದ ಕ್ರಮ ಜರುಗಿಸದಂತೆ ಸಂಬAಧಪಟ್ಟ ಅರಣ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಗ್ರಾಮಸ್ಥರ ಹಿತ ರಕ್ಷಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.