5.7 C
Munich
Home News ಹಾಸನ: ಶಿಕ್ಷಕರ ದಿನಾಚರಣೆ ನಿಮಿತ್ತ ಅಕ್ಷರ ರತ್ನ ಪ್ರಶಸ್ತಿ ವಿತರಣೆ

ಹಾಸನ: ಶಿಕ್ಷಕರ ದಿನಾಚರಣೆ ನಿಮಿತ್ತ ಅಕ್ಷರ ರತ್ನ ಪ್ರಶಸ್ತಿ ವಿತರಣೆ

ಹಾಸನ: ಶಿಕ್ಷಕರ ದಿನಾಚರಣೆಯನ್ನು ಸಮಾಜದ ಪ್ರತಿಯೊಬ್ಬರು ಸಂಭ್ರಮಿಸಿ ಆಚರಣೆ ಮಾಡುತ್ತಿದ್ದ ಕಾಲ ಕಣ್ಮರೆಯಾಗಿ ಇಂದು ಶಿಕ್ಷಕರೇ ಶಿಕ್ಷಕರ ಆಚರಣೆಮಾಡಿಕೊಳ್ಳುವ ದುಸ್ಥಿತಿಗೆ ಬಂದಿದೆ ಎಂದು ಅಕ್ಷರ ಅಕಾಡೆಮಿ ಮುಖ್ಯಸ್ಥ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಅಧ್ಯಕ್ಷ ಟೈಮ್ಸ್ ಗಂಗಾಧರ್ ಬಿ.ಕೆ. ಅಭಿಪ್ರಾಯಪಟ್ಟರು.

ನಗರದ ರಿಂಗ್ ರಸ್ತೆಯಲ್ಲಿರುವ ಅಕ್ಷರ ಅಕಾಡೆಮಿಯಲ್ಲಿ ಶುಕ್ರವಾರ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಕ್ಷರ ರತ್ನ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ, ಈ ಹಿಂದಿನ ದಿನಗಳಲ್ಲಿ ಶಿಕ್ಷಕರೆಂದರೆ ಸಮಾಜದಲ್ಲಿ ಅವರನ್ನು ನೋಡು ರೀತಿಯೇ ಬೇರೆ ಇರುತಿತ್ತು. ಅದರಲ್ಲೂ ಗ್ರಾಮೀಣ ಭಾಗದಲ್ಲಂತೂ ಶಿಕ್ಷಕರನ್ನು ದೇವರಂತೆ ಕಾಣುತ್ತಿದ್ದರು, ಶಿಕ್ಷಕರ ದಿನಾಚರಣೆಯೆಂದು ಅವರನ್ನು ಈಡಿ ಗ್ರಾಮವೇ ಆಚರಣೆ ಮಾಡುತಿತ್ತು.

ಆದರೇ ಕಾಲ ಬದಲಾದಂತೆ ಇಂದು ಶಿಕ್ಷಕರಿಗೆ ನೀಡುವ ಸ್ಥಾನಮಾನ ಹಾಗೂ ಅವರನ್ನು ಗೌರವದಿಂದ ಕಾಣುವ ಮನಸ್ಥಿತಿ ಬದಲಾಗಿದೆ. ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವ ಸಂಖ್ಯೆಯು ಇತ್ತೀಚೆಗೆ ಕಡಿಮೆಯಾಗುತ್ತಿದೆ, ಶಿಕ್ಷಕ ವೃತ್ತಿ ಮಾಡಿದವರು ಹಾಗೂ ಮಾಡುತ್ತಿರುವವರು ಕೂಡ ತಮ್ಮ ಮಕ್ಕಳನ್ನು ಈ ವೃತ್ತಿಗೆ ಸೇರಿಸುತ್ತಿಲ್ಲ. ವೈದ್ಯರ ಮಕ್ಕಳು ವೈದ್ಯರಾಗುತ್ತಾರೆ, ವ್ಯವಹಾರಿಕ ಕ್ಷೇತ್ರದಲ್ಲಿರುವವರ ಮಕ್ಕಳು ಅದೇ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಆದರೇ ಶಿಕ್ಷಕರ ಮಕ್ಕಳು ಇದೇ ಕ್ಷೇತ್ರ ಮಾಡಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಾರೆ.

ಆರ್ಥಿಕವಾಗಿ ಈ ಕ್ಷೇತ್ರ ಅಷ್ಟು ಬೆಳೆಯದಿದ್ದರು, ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಯಾವುದೇ ಸ್ವಾರ್ಥವಿಲ್ಲದೆ ತಮ್ಮಲ್ಲಿರುವ ವಿದ್ಯೆಯನ್ನು ಸಮಾಜದಲ್ಲಿನ ಮಕ್ಕಳಿಗೆ ಹೇಳಿಕೊಡುವ ಮೂಲಕ ದೇಶದಲ್ಲಿ ಉತ್ತಮ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ಶಿಕ್ಷಕರು ವಹಿಸುತ್ತಾರೆ ಎಂದು ಹೇಳಿದರು.
ರೋಟರಿ ಜೋನ್ ೯ರ ಸಹಾಯಕ ಗವರ್ನರ್ ಮಂಜುನಾಥ್ ಮಾತನಾಡಿ, ನಿಸ್ವಾರ್ಥ ಸೇವೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ.

ಅದೇ ಮಾರ್ಗದಲ್ಲಿ ಟೈಮ್ಸ್ ಗಂಗಾಧರ್ ಅವರು ಸಮಾಜದ ಒಂದು ಭಾಗವವಾಗಿ ಒಂದಿಲ್ಲೊಂದು ಕಾರ್ಯಕ್ರಮವನ್ನು ಸಮಾಜಕ್ಕಾಗಿ ನೀಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಶಿಕ್ಷಕರ ದಿನಾಚರಣೆ ಅಂಗವಾಗಿ ಅವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿಯೇ ಕೆಲಸ ಮಾಡುತ್ತಿರುವ ಯಾರಾದರು ನಾಲ್ಕೈದು  ಶಿಕ್ಷಕರನ್ನು ಸನ್ಮಾನಿಸಬಹುದಿತ್ತು. ಆದರೇ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಸರ್ಕಾರಿ ಶಾಲಾ ಮಕ್ಕಳಿಗಾಗಿ ದಿನನಿತ್ಯ ದುಡಿಯುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯವಾದುದು. ಶಿಕ್ಷಕರು ಯಾವುದೇ ಸ್ವಾರ್ಥ ಭಾವನೆಯಿಲ್ಲದೆ ನೂರಾರು ಮಕ್ಕಳಿಗೆ ವಿದ್ಯೆ ದಾನ ಮಾಡುತ್ತಿದ್ದಾರೆ.

ಹಾಗಾಗಿ ಸಮಾಜದ ಉಳಿತಿಗಾಗಿ ದುಡಿಯುವ ನಿಸ್ವಾರ್ಥ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರುಗಳಾದ ಎಚ್.ಡಿ. ಅಣ್ಣಾಜಿಗೌಡ, ಎಚ್.ಎಂ. ಮನೋಜ್ ಕುಮಾರ್, ರಹಮತ್ ಉಲ್ಲಾ ಹಾಗೂ ವೈ. ಗಿರಿಜಾ ದಿನಕರ ಅವರುಗಳ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅವರುಗಳನ್ನು ಅಕ್ಷರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೋಟರಿ ಜೋನ್ ೯ರ ವಲಯ ಸೇನಾನಿ ಮಮತ ಪಾಟೀಲ್, ಅಕ್ಷರ ಅಕಾಡೆಮಿ ಸಂಯೋಜಕ ಕಾರ್ತಿಕ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಕಾರ್ಯದರ್ಶಿ ರವಿ ಕುಮಾರ್ ಪಿ., ಖಜಾಂಚಿ ದಿಲೀಪ್ ಕುಮಾರ್ ಎಚ್.ಕೆ., ಸದಸ್ಯರುಗಳಾದ ಯೋಗೇಶ್ ಎಸ್., ಸಚ್ಚಿನ್, ಡಾ. ವಿಕ್ರಂ, ಯೋಗೀಶ್ ಆರ್, ಸತೀಶ್, ಗಿರೀಶ್, ಪುನೀತ್, ಮಹೇಶ್ ಹಾಗೂ ಇತರರು ಹಾಜರಿದ್ದರು.

error: Content is protected !!