ಬೆಂಗಳೂರು: ಕನ್ನಡ ಸಿನಿರಂಗದ ಗೋಲ್ಡನ್ ಕ್ವೀನ್ ಎಂದು ಅಭಿಮಾನಿಗಳ ಮನಸೂರೆಗೊಂಡ ನಟಿ ಅಮೂಲ್ಯ, ಎಂಟು ವರ್ಷದ ಬಳಿಕ ಮತ್ತೆ ನಾಯಕಿಯಾಗಿ ಬೆಳ್ಳಿತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ.
ಅಮೂಲ್ಯ ಅವರ ಹುಟ್ಟುಹಬ್ಬದಂದೇ ನಿರ್ದೇಶಕ ಮಂಜು ಸ್ವರಾಜ್ ಅವರ ಹೊಸ ಸಿನಿಮಾದ ಅನೌನ್ಸ್‌ಮೆಂಟ್ ಆಗಿದ್ದು, ಸಣ್ಣ ಟೀಸರ್ ಮೂಲಕ ಅವರ ಕಮ್‌ಬ್ಯಾಕ್‌ಗೆ ತಂಡ ಸ್ವಾಗತ ಕೋರಿದೆ. “ಪೀಕಬೂ” ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ಅಮೂಲ್ಯ ಅವರ ಎಂಟ್ರಿ ಟೀಸರ್ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.
ಟೀಸರ್‌ನಲ್ಲಿ ಅಮೂಲ್ಯ ತಮ್ಮ ವಿಶಿಷ್ಟ ಪಾತ್ರ ಶೈಲಿಯಲ್ಲೇ ಸಿಂಗಲ್ ಟೆಕ್‌ನಲ್ಲಿ ಸ್ಟೆಪ್ಸ್ ಹಾಕಿದ್ದು, ಡ್ಯಾನ್ಸ್ ಅನ್ನು ಖ್ಯಾತ ಕೊರಿಯೋಗ್ರಾಫರ್ ವಿ. ನಾಗೇಂದ್ರ ಪ್ರಸಾದ್ ರೂಪಿಸಿದ್ದಾರೆ. ಮ್ಯೂಸಿಕ್‌ಗೆ ಹಾಸ್ಯಮಯ ತೇಜಸ್ಸು ನೀಡಿರುವುದು ಗಮನಾರ್ಹ.
“ಪೀಕಬೂ” ಪದವನ್ನು ಮಕ್ಕಳನ್ನು ನಗಿಸಲು ಬಳಸಲಾಗುತ್ತದೆ. ಅದೇ ರೀತಿಯಲ್ಲಿ ಮಕ್ಕಳ ಮನಸ್ಸಿಗೆ ಹತ್ತಿರವಾದ ಸಂದೇಶ ಜೊತೆಗೆ ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಈ ಚಿತ್ರದಲ್ಲಿ ಇರಲಿದೆ ಎಂದು ತಂಡ ತಿಳಿಸಿದೆ.
ಚಿತ್ರದಲ್ಲಿ ಅಮೂಲ್ಯ ನಾಯಕಿಯಾಗಿ ಅಭಿನಯಿಸುತ್ತಿದ್ದರೂ, ಹೀರೋ ಯಾರು ಎಂಬುದನ್ನು ಇನ್ನೂ ತಂಡ ಬಹಿರಂಗಪಡಿಸಿಲ್ಲ. ಮಂಜು ಸ್ವರಾಜ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸುರೇಶ್ ಬಾಬು ಸಿನಿಮಾಟೋಗ್ರಾಫರ್, ವೀರ್ ಸಮರ್ಥ್ ಸಂಗೀತ ನಿರ್ದೇಶಕ. ಶ್ರೀ ಕೆಂಚಾಂಬಾ ಫಿಲಂಸ್ ಅಡಿಯಲ್ಲಿ ಗಣೇಶ್ ಕೆಂಚಾಂಬಾ ನಿರ್ಮಾಣ ಮಾಡುತ್ತಿದ್ದಾರೆ.










