ಬೇಲೂರು: ಉಸಿರುಗಟ್ಟಿಸಿ ಒಂಟಿ ಮಹಿಳೆ ಕೊಲೆ ಮನೆಯ ಹಾಲ್‌ನಲ್ಲಿ ನಗ್ನ ಸ್ಥಿತಿಯಲ್ಲಿ ಮೃತದೇಹ ಪತ್ತೆ: ತನಿಖೆ ಚುರುಕು

A woman was murdered by strangers who suffocated her by putting a pillow over her face on Ganigera Street in the town. The deceased has been identified as Spandana (24), originally from Mallanahalli in Chikkamagaluru district.

ಬೇಲೂರು: ಅಪರಿಚಿತರು ಮುಖಕ್ಕೆ ದಿಂಬು ಹಾಕಿ ಉಸಿರುಗಟ್ಟಿಸಿ ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಪಟ್ಟಣದ ಗಾಣಿಗೇರ ಬೀದಿಯಲ್ಲಿ ನಡೆದಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆ ಮಲ್ಲನಹಳ್ಳಿ ಮೂಲದ ಸ್ಪಂದನಾ (24) ಮೃತ ಮಹಿಳೆ.

ನೆಹರು ನಗರದ ಪಣಂ ಬೀದಿಯ ನಿವಾಸಿ ಮಲ್ಲಿಕಾರ್ಜುನ ಸೇರಿದ ಹೆಂಚಿನ ಮನೆ ಗಾಣಿಗೇರ ಬೀದಿಯಲ್ಲಿದೆ. ಕಳೆದ 1ತಿಂಗಳಿಂದ ಯಾರೂ ಬಾಡಿಗೆಗೆ ಬಾರದೆ ಇದ್ದುದರಿಂದ ಮನೆ ಖಾಲಿ ಇತ್ತು.8 ದಿನಗಳ ಹಿಂದೆ ಸ್ಪಂದನಾ ಅವರು ಮನೆ ಬಾಡಿಗೆಗೆ ಕೇಳಿಕೊಂಡು ಬಂದು ಗಾಣಿಗೇರ ಬೀದಿಯಲ್ಲಿ ಖಾಲಿ ಇದ್ದ ಮನೆ ಸೇರಿಕೊಂಡಿದ್ದರು. ಹಿಂದೆ ನಾನು ಪಟ್ಟಣದಲ್ಲಿಯೇ ಹೊಸ ನಗರದಲ್ಲಿ ವಾಸವಾಗಿದ್ದೆ ಎಂದು ತಿಳಿಸಿ ಪರಿಚಯ ಮಾಡಿಕೊಂಡು ಮನೆ ಪಡೆದಿದ್ದರು. ತಿಂಗಳಿಗೆ 3000 ಬಾಡಿಗೆ ಫಿಕ್ಸ್ ಮಾಡಿ, 10 ಸಾವಿರ ಅಡ್ವಾನ್ಸ್ ಎಂದು ತಿಳಿಸಲಾಗಿತ್ತು.

ಮೊದಲಿಗೆ ಸ್ಪಂದನಾ 3000 ಅಡ್ವಾನ್ಸ್ ನೀಡಿ, ಉಳಿದ ಹಣವನ್ನು ನಂತರ ಕೊಡುವುದಾಗಿ ಹೇಳಿದ್ದರು. ಇದಕ್ಕೆ ಮನೆ ಮಾಲೀಕರು ಒಪ್ಪಿದ್ದರು. ನ.10 ರಿಂದ ಸ್ಪಂದನಾ ಒಬ್ಬನೇ ಮನೆಯಲ್ಲಿ ವಾಸವಾಗಿದ್ದರು. ನ.15ರಂದು ಸಂಜೆ 5.25 ಗಂಟೆಗೆ ಟಿವಿಯ ಡಿಶ್ ಹಾಕಿಸಿಕೊಡಲು ಯಾರನ್ನಾದರು ಕಳುಹಿಸಿ ಎಂದು ಸ್ಪಂದನಾ, ಮಾಲೀಕರಿಗೆ ತಿಳಿಸಿದ್ದರು. ಆಟೋ ಓಡಿಸುತ್ತಿದ್ದೇನೆ ಆ ಮೇಲೆ ನಿಮಗೆ ಫೋನ್ ಮಾಡುತ್ತೇನೆ ಎಂದು ಹೇಳಿ ಮಾಲೀಕರು ಸುಮ್ಮನಾಗಿದ್ದರು.

ನ.19 ರಂದು ಮಧ್ಯಾಹ್ನ 1.30ರ ಸಮಯದಲ್ಲಿ ಗಾಣಿಗೇರ ಬೀದಿಯ ವಾಸಿ ಮನೋಹರಮ್ಮ ಎಂಬುವರು ಮಲ್ಲಿಕಾರ್ಜುನ ಅವರಿಗೆ ಕರೆ ಮಾಡಿ ನಿಮ್ಮ ಮನೆಯ ಮುಂಬಾಗಿಲು ಬೆಳಗ್ಗೆಯಿಂದಲೂ ಅರ್ಧ ತೆರದಿದೆ ಎಂದು ತಿಳಿಸಿದರು.

ಕೂಡಲೇ ಮಲ್ಲಿಕಾರ್ಜುನ್ ಮನೆಯ ಹತ್ತಿರ ಹೋಗಿ, ಮನೆಯ ಅಕ್ಕಪಕ್ಕದವರನ್ನು ಕರೆದು ಮನೆಯ ಮುಂದೆ ನಿಂತುಕೊಳ್ಳುವಂತೆ ತಿಳಿಸಿ ಅರ್ಧ ತೆಗೆದಿದ್ದ ಬಾಗಿಲನ್ನು ತಳ್ಳಿ ಹೋಗಿ ನೋಡಿದಾಗ ಮುಂಭಾಗದ ಹಾಲ್‌ನಲ್ಲಿ ಸ್ಪಂದನಾ ಅಂಗಾತಳಾಗಿ ಬಟ್ಟೆ ಇಲ್ಲದೆ ಅರ್ಧ ಬೆಡ್ ಶೀಟ್ ಮುಚ್ಚಿದಂತೆ ಮಲಗಿದ್ದರು.

ಕಣ್ಣು ಹಾಗೂ ಬಾಯಿ ಮೇಲೆ ಇರುವೆ ಮುತ್ತಿಕೊಂಡಿದ್ದರಿಂದ ಮೃತಪಟ್ಟಿರುವುದು ಖಾತ್ರಿಯಾಗಿತ್ತು. ಈ ನಡುವೆ ದೇಹದ ಕೆಲವು ಭಾಗಗಳಲ್ಲಿ ಕೆಂಪಾಗಿ ಕಂದಿದಂತೆ ಕಂಡು ಬಂದಿದ್ದು, ಪಕ್ಕದಲ್ಲಿಯೇ ದಿಂಬು ಬಿದ್ದಿತ್ತು. ಯಾರೋ ಅಪರಿಚಿತರು ಮನೆಗೆ ಬಂದು ಆಕೆಯ ಮುಖಕ್ಕೆ ದಿಂಬು ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಘಟನೆ ಮಾಹಿತಿ ತಿಳಿದ ಕೂಡಲೇ ಸಿಪಿಐ ರೇವಣ್ಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಸಹಜವಾಗಿಯೇ ಪಟ್ಟಣ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.