ಅರಸೀಕೆರೆ: ಒಳ್ಳೆಯ ವಿಚಾರಗಳಿಗೆ ಶರಣಾಗಿ ತಲೆಬಾಗುವವನೇ ನಿಜವಾದ ಶರಣ; ಸಮಾಜದ ತಪ್ಪುಗಳನ್ನು ಗುರುತಿಸಿ ತಿದ್ದುವ ಧೈರ್ಯ ಹೊಂದಿ ಸೇವೆಗೆ ಮುಂದಾಗುವವನೇ ಸತ್ಯವಾದ ಸಮಾಜಸೇವಕ ಎಂದು ನಗರದ ಎಸ್.ಎಸ್. ಆಸ್ಪತ್ರೆಯ ವೈದ್ಯ ಡಾ. ಶಿವಕುಮಾರ್ ಹೇಳಿದರು.
ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಶರಣ ಸಾಹಿತ್ಯ ಪರಿಷತ್ ಮೈಸೂರು ವಿಭಾಗ, ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಶರಣ ಧರ್ಮಪ್ರಸಾರ, ಶರಣರು ಧಾರ್ಮಿಕ ಚಿಂತನೆ ಮತ್ತು ಶ್ರೀ ಶಿವಲಿಂಗೇಶ್ವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು 12ನೇ ಶತಮಾನದಲ್ಲಿಯೇ ಇಡೀ ವಿಶ್ವಕ್ಕೆ ದಾರಿದೀಪವಾದ ಬಸವಣ್ಣನವರು ಜಾತಿ ಮೇಲುಕೀಲು ಎಂಬ ಪಿಡುಗನ್ನು ತೊಡೆದು ಹಾಕಿ, ಎಲ್ಲರೂ ಸಮಾನರು ಎಂಬ ಸಂದೇಶವನ್ನು ಅನುಭವ ಮಂಟಪದ ಮೂಲಕ ಸಮಾಜಕ್ಕೆ ನೀಡಿದರು.
ಶ್ರೀಮಂತ ಬಡವ, ಮೇಲ್ವರ್ಗ ಕೀಳ್ವರ್ಗ ಎಂಬ ಭೇದಭಾವವಿಲ್ಲದೆ ಮಾನವೀಯತೆಯನ್ನೇ ಧರ್ಮವೆಂದು ಪ್ರತಿಪಾದಿಸಿದ ಬಸವಣ್ಣನವರ ವಚನಗಳು ಇಂದಿಗೂ ಸಮಾಜಕ್ಕೆ ದಿಕ್ಕು ತೋರಿಸುತ್ತಿವೆ ಎಂದು ಹೇಳಿದರು.
ಶರಣರು ರಚಿಸಿದ ವಚನಗಳು ಕೇವಲ ಸಾಹಿತ್ಯವಲ್ಲ; ಅವು ಬದುಕನ್ನು ರೂಪಿಸುವ ಜೀವನ ತತ್ವಗಳಾಗಿವೆ. ಕಾಯಕ, ದಾಸೋಹ ಮತ್ತು ಸಮಾನತೆ ಎಂಬ ಮೌಲ್ಯಗಳನ್ನು ಪ್ರತಿಪಾದಿಸಿದ ವಚನ ಸಾಹಿತ್ಯವು ಸಾಮಾಜಿಕ ಸುಧಾರಣೆಗೆ ಶಕ್ತಿಯುತ ಸಾಧನವಾಗಿದೆ. ವಚನಗಳು ಅಂಧಶ್ರದ್ಧೆ, ಜಾತಿಭೇದ, ಶೋಷಣೆ ವಿರುದ್ಧ ಧ್ವನಿ ಎತ್ತಿ ಮಾನವೀಯ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಡಾ. ಶಿವಕುಮಾರ್ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಉದ್ದೇಶ ವಚನಗಳನ್ನು ಮನೆಮನೆಗೆ ತಲುಪಿಸುವುದು. ಬೆಳೆಯುತ್ತಿರುವ ಮಕ್ಕಳಿಗೆ ವಚನ ಸಾಹಿತ್ಯದ ಪರಿಚಯ ಮಾಡಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದೇ ನಮ್ಮ ಧ್ಯೇಯ ಎಂದು ಹೇಳಿದರು.
ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ ವಚನಕಾರರ ಕುರಿತು ಪ್ರಶ್ನೋತ್ತರ ನಡೆಸಿ, ಉತ್ತರಿಸಿದ ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಗಂಡಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪುನೀತ್ ಮಾತನಾಡಿ, 12ನೇ ಶತಮಾನದಲ್ಲಿಯೇ ಸಮಾಜ ಸುಧಾರಣೆಗೆ ಪೂರಕವಾದ ಕ್ರಾಂತಿಕಾರಿ ಚಿಂತನೆಗಳನ್ನು ಬಸವಣ್ಣನವರು ನೀಡಿದ ಕಾರಣ ಅವರನ್ನು ವಿಶ್ವಮಾನವ ಎಂದು ಕರೆಯಲಾಗುತ್ತದೆ.
ಮಾನವೀಯತೆಯೇ ಅತಿದೊಡ್ಡ ಧರ್ಮ; ಕಾಯಕಕ್ಕೆ ಗೌರವ ನೀಡುವ ಬದುಕೇ ಶರಣ ಧರ್ಮದ ಸಾರ. ಉಸಿರು ಇರುವವರೆಗೂ ಒಳ್ಳೆಯ ಕಾರ್ಯ ಮಾಡುವುದು ಶರಣರ ಬದುಕಿನ ಸಂದೇಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ತಿಪ್ಪೇಸ್ವಾಮಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಂಜುನಾಥ್, ಕೋಡಿಮಠ ಕಾಲೇಜಿನ ಪ್ರಾಂಶುಪಾಲ ಸುರೇಶ್, ಕನ್ನಡಪ್ರಭ ವರದಿಗಾರ ಬಸವರಾಜ್ ಶಾಂತಕುಮಾರ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
A true devotee is one who surrenders to good ideas and bows his head; a true social worker is one who has the courage to identify and correct the mistakes of society and step forward to serve, said Dr. Shivakumar, a doctor at the city’s S.S. Hospital.










