ಹಾಸನದಲ್ಲಿ ಟರ್ಫ್ ಹಾಕಿ ಕ್ರೀಡಾಂಗಣಕ್ಕೆ ಅನುದಾನ ಕೋರಿ 2024ರಲ್ಲೇ ಪ್ರಸ್ತಾವನೆ: ಶಾಸಕ ಸ್ವರೂಪ್

ಹಾಸನ: ರಾಜ್ಯದಲ್ಲೇ ವಿಶೇಷವಾಗಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿ ಮತ್ತು ಫುಟ್ಬಾಲ್ ಆಟಗಳಿಗಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ ಟರ್ಫ್  ಮೈದಾನ ನಿರ್ಮಾಣ ಮಾಡಲು ೩೦ ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ೨೦೨೪ ಅಕ್ಟೋಬರ್ ೧೪ ರಂದೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ತಿಳಿಸಿದ್ದಾರೆ.

ನಮ್ಮ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಕೇಂದ್ರ ಕ್ರೀಡಾ ಹಾಗೂ ಯುವ ವ್ಯವಹಾರಗಳ ಸಚಿವ ಡಾ.ಮನ್ಸುಖ್ ಮಾಂಡವೀಯ ಅವರೊಂದಿಗೆ ಚರ್ಚಿಸಿದ್ದು, ಮೊದಲ ಕಂತಿನಲ್ಲಿ ೧೦ ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ದೊರೆತಿದೆ ಎಂದಿದ್ದಾರೆ.

ಜಿಲ್ಲಾ ಕ್ರೀಡಾಂಗಣ ೩೦.೦೬ ಎಕರೆ ವಿಸ್ತೀರ್ಣ ಇದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈಗಾಗಲೇ ವಿವಿಧ ರೀತಿಯ ಮೂಲಸೌಲಭ್ಯ ಕಲ್ಪಿಸಿದೆ. ಜೊತೆಗೆ ಫುಟ್ಬಾಲ್, ಹಾಕಿ, ವಾಲಿಬಾಲ್ ಕ್ರೀಡಾಕೂಟ ಹಾಗೂ ತಾಲೀಮಿಗೆಂದು ಆಟದ ಮೈದಾನಗಳನ್ನೂ ನಿರ್ಮಾಣ ಮಾಡಿದೆ. ಹೀಗಾಗಿ ಇಲ್ಲಿ ವಿವಿಧ ಕ್ರೀಡಾಕೂಟ ನಡೆಸಲು ಉತ್ತಮ ವ್ಯವಸ್ಥೆ ಇದೆ. ಜೊತೆಗೆ ಉತ್ತಮ ಹಾಗೂ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವಾಯುವಿಹಾರ, ಕ್ರೀಡೆಗಾಗಿ ಉತ್ತಮ ವೇದಿಕೆ ಇದಾಗಿದೆ ಎಂದು ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಮುಂದುವರಿದು ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿ ಕೋರ್ಟ್ ಹಾಗೂ ಫುಟ್ಬಾಲ್ ಮೈದಾನ ಇದ್ದು, ನೂರಾರು ಹಿರಿಯ ಹಾಗೂ ಯುವ ಆಟಗಾರರು ಇಲ್ಲಿ ಪ್ರತಿದಿನ ಅಭ್ಯಾಸ ಮಾಡುತ್ತಾರೆ. ಇಲ್ಲಿ ಅಭ್ಯಾಸ ಮಾಡಿದವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗಿಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇನ್ನೂ ಕೆಲವರು ದೇಶ ಮಟ್ಟದ ಶಿಬಿರಗಳಲ್ಲಿ ತರಬೇತಿಗೆ ಆಯ್ಕೆ ಆಗಿದ್ದಾರೆ. ಮತ್ತೆ ಕೆಲವರು ವಿವಿಧ ಕ್ರೀಡಾಕ್ಲಬ್‌ಗಳಿಗೆ ಆಯ್ಕೆಯಾಗಿ ತಮ್ಮ ಕ್ರೀಡಾಸ್ಫೂರ್ತಿ ಮೆರೆಯುತ್ತಿದ್ದಾರೆ.

ಹೀಗಾಗಿ ವಿಶೇಷವಾಗಿ ಫುಟ್‌ಬಾಲ್ ಮತ್ತು ಹಾಕಿ ಆಟಗಳಿಗೆ ಪೂರಕವಾದ ಅತ್ಯುತ್ತಮ ವಾತಾರವಣ ಕಲ್ಪಿಸಬೇಕು. ಕ್ರೀಡಾ ಮೈದಾನಗಳನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸಲು ಅನುಕೂಲ ಮಾಡಿಕೊಡಬೇಕಿದೆ. ಅದಕ್ಕಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ಸ್ ಮೈದಾನ ನಿರ್ಮಾಣ ಮಾಡುವುದು ಅಗತ್ಯವಿದೆ. ಅದಕ್ಕಾಗಿ ೩೦ ಕೋಟಿ ವೆಚ್ಚವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಅಂದಾಜು ಪಟ್ಟಿ ತಯಾರಿಸಿದ್ದು, ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ೩೦ ಕೋಟಿ ರೂ. ಅನುದಾನ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ಸ್ವರೂಪ್ ಪ್ರಕಾಶ್ ವಿವರಣೆ ನೀಡಿದ್ದಾರೆ.