ಚಿಕ್ಕಮಗಳೂರು/ತರೀಕೆರೆ: ಬರ್ತ್ಡೇಗೆ ಇನ್ಸ್ಟಾಗ್ರಾಂನಲ್ಲಿ ಶುಭಾಶಯ ಕಳಿಸಿದ್ದೇ ಪ್ರಾಣಕ್ಕೆ ಕುತ್ತಾದ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅತ್ತಿಗನಾಳ್ ಸಮೀಪ ನಡೆದಿದೆ. ಯುವತಿಯೊಂದಿಗೆ ಹಿಂದಿನ ಪ್ರೀತಿಯ ಕಾರಣಕ್ಕೆ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಮಂಜುನಾಥ್ (24) ಎಂದು ಗುರುತಿಸಲಾಗಿದೆ. ಆತ ಮೂಲತಃ ತರೀಕೆರೆ ತಾಲೂಕಿನ ಉಡೇವಾ ಗ್ರಾಮದ ನಿವಾಸಿ. ಅಡಿಕೆ ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ್, ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುವ ವೇಳೆ ದಾಳಿ ನಡೆದಿದೆ.
ಎಂಗೇಜ್ಮೆಂಟ್ ನಂತರವೂ ಸಂಪರ್ಕ
ಮಂಜುನಾಥ್ ಈ ಹಿಂದೆ ಯುವತಿಯೊಂದಿಗಿನ ಪ್ರೀತಿಯ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಸಂಬಂಧಕ್ಕೆ ಯುವತಿಯ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ನಂತರ ಯುವತಿಗೆ ಅತ್ತಿಗನಾಳ್ ಗ್ರಾಮದ ವೇಣು ಎಂಬ ಯುವಕನೊಂದಿಗೆ ಎಂಗೇಜ್ಮೆಂಟ್ ಮಾಡಲಾಗಿತ್ತು. ಎಂಗೇಜ್ಮೆಂಟ್ ಬಳಿಕ ಮಂಜುನಾಥ್ ಯುವತಿಯನ್ನು ಸಂಪರ್ಕಿಸದಂತೆ ಆಕೆಯ ಸಹೋದರ ಕಿರಣ್ ಹಲವು ಬಾರಿ ಎಚ್ಚರಿಕೆ ನೀಡಿದ್ದನೆನ್ನಲಾಗಿದೆ. ಆದರೆ ಇತ್ತೀಚೆಗೆ ಯುವತಿಯ ಬರ್ತ್ಡೇ ದಿನ ಮಂಜುನಾಥ್ ಇನ್ಸ್ಟಾಗ್ರಾಂನಲ್ಲಿ ಶುಭಾಶಯ ಕಳಿಸಿದ್ದ ವಿಷಯ ತಿಳಿದು ಯುವತಿಯ ಸಹೋದರ ಮತ್ತಷ್ಟು ಕೋಪಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಜಿತ ಹಲ್ಲೆ, ಯುವಕನ ಸಾವು
ನಿನ್ನೆ ಸಂಜೆ ಸುಮಾರು 7 ಗಂಟೆ ವೇಳೆಗೆ ಕಿರಣ್, ವೇಣು ಹಾಗೂ ಅವರ ಸ್ನೇಹಿತರಾದ ಅಪ್ಪು ಮತ್ತು ಮಂಜು ಮಂಜುನಾಥ್ಗೆ ಫೋನ್ ಮಾಡಿ ಅತ್ತಿಗನಾಳ್ ಸಮೀಪಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಮಂಜುನಾಥ್ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಜುನಾಥ್ ಸಾವನ್ನಪ್ಪಿದ್ದಾರೆ.
ಇಬ್ಬರ ಬಂಧನ, ತನಿಖೆ ಮುಂದುವರಿಕೆ
ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಯುವತಿಯ ಸಹೋದರ ಕಿರಣ್ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಈ ಕುರಿತು ಮಾತನಾಡಿದ ಚಿಕ್ಕಮಗಳೂರು ಎಎಎಸ್ಪಿ ಜಯಕುಮಾರ್, ಬರ್ತ್ಡೇ ವಿಶ್ ವಿಚಾರವೇ ಕೊಲೆಗೆ ಕಾರಣ ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದರು. ಯುವತಿಯ ಪಾತ್ರವಿದೆಯೇ? ಹಿಂದಿನ ಪ್ರೀತಿ ಸಂಬಂಧದಲ್ಲಿ ಏನೆಲ್ಲ ನಡೆದಿದೆ? ಎಂಬ ಅಂಶಗಳ ಕುರಿತೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.










