ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಗಸರಹಳ್ಳಿ ಗೇಟ್ ಬಳಿ ಭಯಾನಕ ಘಟನೆ ನಡೆದಿದೆ. ಉಚಿತವಾಗಿ ಮದ್ಯ ನೀಡಲು ನಿರಾಕರಿಸಿದ ಕಾರಣಕ್ಕೆ ಪುಂಡರು ಬಾರ್ಗೆ ಬೆಂಕಿ ಹಚ್ಚಿರುವ ಘಟನೆ ಸ್ಥಳೀಯರಲ್ಲಿ ಭೀತಿಯನ್ನುಂಟುಮಾಡಿದೆ.
ಅಗಸರಹಳ್ಳಿ ಗ್ರಾಮದ ಪರಮೇಶ್ ಅವರಿಗೆ ಸೇರಿದ ‘ಈಗಲ್ ಬಾರ್ ಅಂಡ್ ರೆಸ್ಟೋರೆಂಟ್’ಗೆ ಮುರುಕನಹಳ್ಳಿ ಗ್ರಾಮದ ರಕ್ಷಿತ್ ಹಾಗೂ ಆತನ ಇಬ್ಬರು ಸ್ನೇಹಿತರು ತೆರಳಿ, ಫ್ರೀ ಮದ್ಯದ ಬಾಟಲ್ ನೀಡುವಂತೆ ಒತ್ತಾಯಿಸಿದ್ದಾರೆ. ಬಾರ್ ಸಿಬ್ಬಂದಿ ಮತ್ತು ಮಾಲೀಕರು ಅದನ್ನು ನಿರಾಕರಿಸಿದಾಗ, ಆಕ್ರೋಶಗೊಂಡ ಆರೋಪಿಗಳು ಗಲಾಟೆ ನಡೆಸಿದ್ದಾರೆ.
ಕೋಪದ ಅಟ್ಟಹಾಸ ತಾಳಲಾಗದೆ, ಆರೋಪಿಗಳು ಬಾರ್ ಕಟ್ಟಡದ ಮೇಲೆ ಮತ್ತು ಮಾಲೀಕರ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಸಂಪೂರ್ಣ ಘಟನೆ ಬಾರ್ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ದೃಶ್ಯಗಳು ಸ್ಪಷ್ಟವಾಗಿವೆ.
ಘಟನೆಯಿಂದ ಬಾರ್ ಮುಂಭಾಗ ಹಾಗೂ ಕಾರಿಗೆ ಭಾರೀ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಈ ಘಟನೆ ಗ್ರಾಮಸ್ಥರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಮಾಹಿತಿ ಪಡೆದ ತಕ್ಷಣ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.










