ಹಾಸನ: ಸಂವಿಧಾನ ಸಮರ್ಪಣಾ ದಿನದ ಪ್ರಯುಕ್ತ ನ.28ರಂದು ಶುಕ್ರವಾರ ದಲಿತರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯ, ಜಾತಿ ವೈಷಮ್ಯ, ಅಸಹಿಷ್ಣುತೆ ಮತ್ತು ಸಂವಿಧಾನ ಮೌಲ್ಯಗಳ ಮೇಲಿನ ದಾಳಿ ಕುರಿತು ಅಸಮಾಧಾನ ವ್ಯಕ್ತಪಡಿಸುವ ಸಲುವಾಗಿ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರಾಲಿ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಾಷಿರ್ ಅಹಮದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದಿಗೂ ದೇಶದಲ್ಲಿ ಜಾತಿ, ಧರ್ಮಾಧಾರಿತ ದೌರ್ಜನ್ಯಗಳಿವೆ. ಆರ್.ಎಸ್.ಎಸ್. ಮತ್ತು ಅದರ ಮನುವಾದಿ ಚಿಂತನೆಗಳೇ ದಲಿತರ ಮೇಲಿನ ಹಲ್ಲೆಗಳು, ಧ್ವಂಸಗಳು ಹಾಗೂ ಜಾತಿ ದಮನಕ್ಕೆ ಕಾರಣ ಎಂದು ಆರೋಪಿಸಿದ ಅವರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲೆ ನಡೆದ ಅವಮಾನ, ರಾಜ್ಯಮಟ್ಟದ ರಾಜಕೀಯ ನಾಯಕರಿಗೆ ಬಂದ ಬೆದರಿಕೆ, ದಲಿತ ಕುಟುಂಬಗಳ ಮೇಲೆ ನಡೆದ ಹಲ್ಲೆಗಳು, ಬುದ್ಧ-ಅಂಬೇಡ್ಕರ್ ಪ್ರತಿಮೆಗಳ ಧ್ವಂಸ ಖಂಡಿಸಿ ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿದ ದಿನವಾದ ನ.26 ರಂದು ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಡಾ. ಬಿ.ಆರ್. ಅಂಭೇಡ್ಕರ್ ಭವನದಲ್ಲಿ ಅಂದು ಸಮಾವೇಶ ನಡೆಯಲಿದೆ. ಅದಕ್ಕೂ ಮುನ್ನ ಬೃಹತ್ ರ‍್ಯಾಲಿ ನಡೆಯಲಿದೆ. ಜಿಲ್ಲೆಯ ಎಲ್ಲ ದಲಿತಪರ, ಸಂವಿಧಾನಪರ ಸಂಘಟನೆಗಳ ಸದಸ್ಯರು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ರಕ್ಷಣೆ ಸಂಕಲ್ಪ ತೊಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಮುಖಂಡರಾದ ಮೊಹರಂ ಯೂಸುಫ್, ಅನ್ಸರ್, ಕೃಪೆದಾಸ್ ಇದ್ದರು.










