ಹಾಸನ: ಚೀಟಿ ಹಣದ ವಿವಾದಕ್ಕೆ ಜಗಳ, ಪತ್ನಿಯ ಕೊಲೆಯಲ್ಲಿ ಅಂತ್ಯ; ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪತಿ

A fight between a couple over a lottery ticket dispute in Ibbadi Konanur village of Sakleshpur taluk has ended in a gruesome murder.

ಹಾಸನ, ಆಗಸ್ಟ್ 14, 2025:  ಸಕಲೇಶಪುರ ತಾಲೂಕಿನ ಇಬ್ಬಡಿ ಕೊಣನೂರು ಗ್ರಾಮದಲ್ಲಿ ಚೀಟಿ ಹಣದ ವಿವಾದಕ್ಕೆ ಸಂಬಂಧಿಸಿದಂತೆ ದಂಪತಿಯ ನಡುವೆ ಉಂಟಾದ ಜಗಳವು ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ.

ಈ ಘಟನೆಯಲ್ಲಿ ಪತ್ನಿಯನ್ನು ಕೊಂದ ಆರೋಪಿಯಾದ ಪತಿ, ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮೃತ ಮಹಿಳೆಯನ್ನು ಶಿವಮ್ಮ (60) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ಶಿವಯ್ಯ (65) ಎಂದು ತಿಳಿದುಬಂದಿದೆ. ಚೀಟಿ ಹಣಕ್ಕೆ ಸಂಬಂಧಿಸಿದಂತೆ ದಂಪತಿಯ ನಡುವೆ ಉಂಟಾದ ಜಗಳ ತಾರಕಕ್ಕೇರಿದ್ದು, ಕೋಪಗೊಂಡ ಶಿವಯ್ಯ, ಮಚ್ಚಿನಿಂದ ಶಿವಮ್ಮನನ್ನು ಕೊಚ್ಚಿ ಕೊಲೆಗೈದಿದ್ದಾನೆ.

ಬಳಿಕ ಅದೇ ಮಚ್ಚಿನಿಂದ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಗೊಂಡಿರುವ ಶಿವಯ್ಯನನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸ್ಥಳಕ್ಕೆ ಸಕಲೇಶಪುರ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣವು ಸಕಲೇಶಪುರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ತನಿಖೆಯನ್ನು ಆರಂಭಿಸಲಾಗಿದೆ.

ಪೊಲೀಸರು ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಿಯ ಚಿಕಿತ್ಸೆಯ ನಂತರ ತನಿಖೆಯನ್ನು ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.