12.9 C
Munich
Home News ದೈಹಿಕ ಶಿಕ್ಷಣವೇ ಆರೋಗ್ಯದ ತಳಹದಿ ಸರ್ಕಾರವು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ದೈಹಿಕ ಶಿಕ್ಷಣವೇ ಆರೋಗ್ಯದ ತಳಹದಿ ಸರ್ಕಾರವು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಚನ್ನರಾಯಪಟ್ಟಣ: ಸರ್ಕಾರವು ಶೈಕ್ಷಣಿಕ ಕ್ಷೇತ್ರದಲ್ಲಿ ದೈಹಿಕ ಶಿಕ್ಷಣಕ್ಕೆ ಒತ್ತು ನೀಡಿ, ಹೆಚ್ಚಿನ ಅನುದಾನವನ್ನು ಕಲ್ಪಿಸುವ ಮೂಲಕ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲೂಕಿನ ಹಿರೀಸಾವೆ ಗ್ರಾಮದ ಎನ್.ಗಂಗಾಧರ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಅವರು ಉದ್ಘಾಟಿಸಿ ಮಾತನಾಡಿ, ದೈಹಿಕ ಶಿಕ್ಷಣವೇ ಆರೋಗ್ಯದ ತಳಹದಿ ಎಂದರು.
ಶಿಕ್ಷಣದ ಜೊತೆಯಲ್ಲಿ ದೈಹಿಕ ಶಿಕ್ಷಣಕ್ಕೆ ದಿನದಲ್ಲಿ ಒಂದು ಗಂಟೆಯನ್ನು ಶಿಕ್ಷಕರು ಮೀಸಲಿಡುವ ಮೂಲಕ ಕ್ರೀಡೆಗಳ ತರಭೇತಿ ನೀಡಬೇಕು. ತಾಲ್ಲೂಕು ಮಟ್ಟದಿಂದ ಜಿಲ್ಲಾ, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಸೇರಿದಂತೆ ಎಲ್ಲರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್ ಮಾತನಾಡಿ, ಹಿರೀಸಾವೆ ಹೋಬಳಿಯಲ್ಲಿ ದೇವರಾಜು ಎಂಬ ಒಬ್ಬರೇ ದೈಹಿಕ ಶಿಕ್ಷಣ ಶಿಕ್ಷಕರಿದ್ದು ಸಮಸ್ಯೆಯಾಗುತ್ತಿದೆ. ಅಗತ್ಯ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು.
ಬಿಇಓ ದೀಪಾ ಮಾತನಾಡಿ, ಮೋಬೈಲ್ ಸೇರಿದಂತೆ ಆಧುನಿಕ ತಂತ್ರಜ್ಞಾನದ ಗೇಮಗಳಿಂದ ಮಕ್ಕಳು ಆಟಾಟೋಪಗಳಲ್ಲಿ ಹೆಚ್ಚು ಭಾಗವಹಿಸುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಪಾಲಕರು ತಾವು ಆರಾಮವಾಗಿ ಟಿ.ವಿ ವೀಕ್ಷಿಸುವ ಸಲುವಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುವುದು ಸರಿಯಲ್ಲ. ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಬೋರಯ್ಯ ಕ್ರೀಡಾ ಧ್ವಜಾರೋಹಣ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಜೆ.ಮಹೇಶ್ ಕ್ರೀಡಾ ಜ್ಯೋತಿ ಬೆಳಗಿಸಿದರು. ಕ್ರೀಡೆಗಳಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಶಾಸಕರು ಬಹುಮಾನ ನೀಡಿದರು.
ಬಿಆರ್‌ಸಿ ಅನಿಲ್, ಇಸಿಒ ಎಸ್.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಬೋರಣ್ಣ, ಮಾರುತಿ ಮಂಜು, ಪಿಡಿಓ ಕೆ.ಜೆ.ಸತೀಶ್, ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಹರೀಶ್, ಎಚ್.ಕೆ. ವೆಂಕಟೇಶ್, ಎಲ್ಲಾ ಶಾಲೆಯ ಮುಖ್ಯಶಿಕ್ಷಕರು, ಹೋಬಳಿಯ ಸಿಆರ್‌ಪಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಇನ್ನಿತರರು ಹಾಜರಿದ್ದರು.

error: Content is protected !!