11.3 C
Munich
Home ಜಿಲ್ಲೆ ಚನ್ನರಾಯಪಟ್ಟಣ: ಶಿಥಿಲಾವಸ್ಥೆ ತಲುಪಿರುವ ಹರಿಹರೇಶ್ವರ ದೇಗುಲ

ಚನ್ನರಾಯಪಟ್ಟಣ: ಶಿಥಿಲಾವಸ್ಥೆ ತಲುಪಿರುವ ಹರಿಹರೇಶ್ವರ ದೇಗುಲ

ಚನ್ನರಾಯಪಟ್ಟಣ: ತಾಲ್ಲೂಕಿನ ಅಗ್ರಹಾರ ಬೆಳಗುಲಿ ಗ್ರಾಮದಲ್ಲಿ ನಿರ್ವಹಣೆ ಹಾಗೂ ಸಂರಕ್ಷಣೆಯ ಕೊರತೆಯಿಂದ ಶಿಥಿಲಾವಸ್ಥೆ ತಲುಪುತ್ತಿರುವ ಹೊಯ್ಸಳರ ಕಾಲದ ಶ್ರೀ ಹರಿಹರೇಶ್ವರ ದೇಗುಲಕ್ಕೆ ಕಾಯಕಲ್ಪದ ಅಗತ್ಯವಿದೆ.
ಸುಮಾರು ೮೦೦ ವರ್ಷಗಳ ಹಿಂದೆ ಅಂದರೆ ಕ್ರಿ.ಶ.೧೨೧೦ ರಲ್ಲಿ ಹೊಯ್ಸಳರ ೨ನೇ ವೀರಬಲ್ಲಾಳನ ಕಾಲಘಟ್ಟದಲ್ಲಿ ದಂಡನಾಯಕನಾಗಿದ್ದ ಕೇಶವರಾಜ ಈ ದೇಗುಲವನ್ನು ಕಟ್ಟಿಸಿರುವ ಬಗ್ಗೆ ಶಾಸನದಲ್ಲಿ ಉಲ್ಲೇಖನವಿದೆ.
ಶ್ರೀ ಹರಿಹರೇಶ್ವರ ದೇಗುಲವು ದ್ವಿಕೂಟಾಚಲ ಅಂದರೆ ೨ ಗರ್ಭಗುಡಿ ಒಳಗೊಂಡ ಹೊಯ್ಸಳ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದೆ. ಶ್ರೀ ಬೆಟ್ಟೇಶ್ವರ(ಕೇಶವ) ಮೂರ್ತಿಯ ಗರ್ಭಗುಡಿ ದಕ್ಷಿಣಾಭಿಮುಖವಾಗಿದ್ದರೆ, ಶ್ರೀ ಶಿವಲಿಂಗ ವಿಗ್ರಹವಿರುವ ಗರ್ಭಗುಡಿ ಪೂರ್ವಾಭಿಮುಖವಾಗಿದ್ದು ಸದ್ಯಕ್ಕೆ ದಿನನಿತ್ಯ ಪೂಜೆ ಮಾತ್ರ ತಪ್ಪದೆ ನಡೆಯುತ್ತಿದೆ.
ದೇಗುಲದ ಅಂಕಣ, ಕಂಬಗಳು ಹಾಗೂ ತೊಲೆಗಳ ಕುಸುರಿ-ಕೆತ್ತನೆಯು ಇನ್ನೂ ಉತ್ತಮ ಸ್ಥಿತಿಯಲ್ಲಿದ್ದು ದೇಗುಲದ ಇತಿಹಾಸವನ್ನು ಪರಿಚಯಿಸುವ ಮೂರು ಶಾಸನಗಳನ್ನು ಅಲ್ಲಲ್ಲಿ ನಿಲುಗಲ್ಲಿನಂತೆ ಕಲ್ಲಿನ ಗೋಡೆಗೆ ಅಳವಡಿಸಲಾಗಿದೆ.
ಆದರೆ ಈ ಪುರಾತನ ಕಾಲದ ದೇಗುಲವು ಮುಜರಾಯಿ ಹಾಗೂ ಪುರಾತತ್ವ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಪುರಾತನ ದೇಗುಲಗಳ ಪಟ್ಟಿಗೆ ಸೇರಿಲ್ಲದ ಪರಿಣಾಮ ನಿರ್ವಹಣೆಯ ಕೊರತೆಯಿಂದ ಅಭಿವೃದ್ಧಿ ಕಾಣದೆ ಸೊರಗುತ್ತಿದೆ ಎಂಬುದು ಸ್ಥಳಿಯರ ದೂರಾಗಿದೆ.
ಅರ್ಚಕರಿಗೆ ಸಂಬಳವಿಲ್ಲ: ಮುಜರಾಯಿ ಹಾಗೂ ಪುರಾತತ್ವ ಇಲಾಖೆಗೆ ಒಳಪಟ್ಟಿಲ್ಲದ ಕಾರಣ ದೇಗುಲದಲ್ಲಿ ಪೂಜಾ ಕಾರ್ಯದಲ್ಲಿ ತೊಡಗುವ ಅರ್ಚಕರಿಗೆ ತಸ್ತಿಕ್ ಹಾಗೂ ಇತರೆ ಯಾವುದೇ ಸಂಬಳ ಸಿಗುತ್ತಿಲ್ಲ. ಇದರಿಂದ ಅರ್ಚಕ ಕುಟುಂಬಗಳಿಗೆ ಯಾವುದೇ ಆರ್ಥಿಕ ನೆರವು ಇಲ್ಲದಂತಾಗಿದೆ. ಆದರೂ ಅರ್ಚಕರು ಹಾಗೂ ಅವರ ಕುಟುಂಬ ಪೂಜಾ ಕಾರ್ಯದಲ್ಲಿ ತೊಡಗುತ್ತಿದೆ. ಸರ್ಕಾರ ಇತ್ತ ಗಮನ ಹರಿಸಬೇಕು ಎಂದು ಗ್ರಾಮದ ಹಿರಿಯರಾದ ನಂಜೇಗೌಡ ತಿಳಿಸಿದರು.

error: Content is protected !!