ಹಾಸನ, ಜೂನ್ 30, 2025: ರಾಜ್ಯ ಸರ್ಕಾರದ ವೈಫಲ್ಯ ಮತ್ತು ಹಗರಣಗಳನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಇಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ನಡೆದ ಮೆರವಣಿಗೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಶಾಸಕರಾದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಎ.ಮಂಜು, ಸಿ.ಎನ್.ಬಾಲಕೃಷ್ಣ, ಎಚ್.ಪಿ.ಸ್ವರೂಪ್‌ಪ್ರಕಾಶ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯ ಎದುರು ಕೆಲಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ಆಡಳಿತ ವೈಫಲ್ಯ ಮತ್ತು ಹಗರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ಎಸ್ಪಿ ವಿರುದ್ಧ ರೇವಣ್ಣ ಕಿಡಿ: ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಮಾತನಾಡಿದ ಎಚ್.ಡಿ.ರೇವಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ವಿರುದ್ಧ ಕೆಂಡಾಮಂಡಲವಾದರು. “ಈ ಜಿಲ್ಲೆಯೊಳಗೆ ಪೊಲೀಸರ ಹಾವಳಿ ಜಾಸ್ತಿಯಾಗಿದೆ. ಬೆಳಿಗ್ಗೆ ಎದ್ದರೆ ಲೂಟಿ, ಕೇಳೋರು ಯಾರೂ ಇಲ್ವಾ? ಆ ಲಿಂಗಾಯಿತರ ಮನೆಗೆ ನುಗ್ಗಿ ಹೊಡೆಯಲು ಹೋಗಿದ್ದಾರೆ, ಅವರಿಗೆ ರಕ್ಷಣೆ ಇಲ್ವಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕರೆಸಿ ಅವರನ್ನು, ಇಲ್ಲ ಅಂದ್ರೆ ಅಲ್ಲಿಗೆ ಬರ್ತಿವಿ. ಬೇಕಾದರೆ ನಮ್ಮನ್ನು ಒಳಗೆ ಹಾಕಲಿ, ನೋಡೋಣ. ಸ್ವಲ್ಪನಾದರೂ ಗೌರವ ಇರಬೇಕು. ಒಂದು ಹೆಣ್ಣು ಹೆಂಗಸು ಎಂದು ಗೌರವ ಕೊಟ್ಟು ಇಲ್ಲಿವರೆಗೆ ತಡ್ಕೊಂಡು ಸುಮ್ಮನಿದ್ವಿ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಆರೋಪ: ರಾಜ್ಯ ಸರ್ಕಾರ ಉತ್ತಮ ಆಡಳಿತ ನಡೆಸಲು ವಿಫಲವಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದರು. ಆರ್‌ಸಿಬಿ ವಿಜಯೋತ್ಸವದ ವೇಳೆ ಸರ್ಕಾರದ ವೈಫಲ್ಯದಿಂದ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಖಂಡಿಸಿದರು. ಹಗರಣಗಳಲ್ಲಿ ಸರ್ಕಾರ ಮುಳುಗಿರುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.










