​ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣಗೌರಿ ದೇವಾಲಯದಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿದ ಕಾರ್ತಿಕ ಅಮಾವಾಸ್ಯೆ ವಿಶೇಷ ಪೂಜೆ

ಮಾಡಾಳು (kannadapost.com): ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಿ ದೇವಾಲಯದಲ್ಲಿ ಬೆಳಕಿನ ಹಬ್ಬ ದೀಪಾವಳಿ ಹಾಗೂ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಶಕ್ತಿ ದೇವತೆ ಅಮ್ಮನವರಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ರಾತ್ರಿ ವಿಶೇಷ ಪೂಜೆಯು ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿತು.

​ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಂಕಲ್ಪದಂತೆ, ನಾಡಿನ ಭಕ್ತರ ಒಳಿತಿಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಸಂಪ್ರದಾಯದಂತೆ ಪ್ರತಿ ತಿಂಗಳು ಅಮಾವಾಸ್ಯೆಯಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿಯೂ ವಿಶೇಷ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.

​ದೀಪಾಲಂಕಾರ ಹಾಗೂ ವಿಶೇಷ ಹೂವಿನ ಅಲಂಕಾರ

​ವಿಶೇಷ ಪೂಜೆಯ ನಿಮಿತ್ತ ದೇವಾಲಯವನ್ನು ಮಾವಿನ ತಳಿರು-ತೋರಣ ಹಾಗೂ ಬಾಳೆಕಂದುಗಳಿಂದ ಸುಂದರವಾಗಿ ಶೃಂಗರಿಸಲಾಗಿತ್ತು. ಅಮಾವಾಸ್ಯೆಯ ಕತ್ತಲಿನಲ್ಲೂ ದೇವಾಲಯದ ಸುತ್ತಲೂ ಕಂಗೊಳಿಸುತ್ತಿದ್ದ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು.

​ತಾಯಿ ಜಗನ್ಮಾತೆ ಮೂಗುತಿ ಸುಂದರಿ ಶ್ರೀ ಸ್ವರ್ಣಗೌರಿ ಅಮ್ಮನವರಿಗೆ, ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಹಾಗೂ ಸುಕ್ಷೇತ್ರ ಕೋಡಿಮಠದ ಮಹಾತಪಸ್ವಿ ಶಿವಲಿಂಗಜ್ಜಯ್ಯ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ರಾತ್ರಿ ಸರಿಯಾಗಿ 8:30 ಗಂಟೆಗೆ ಅರ್ಚಕರು ಮಹಾಮಂಗಳಾರತಿ ಹಾಗೂ ಕರ್ಪೂರದಾರತಿ ಬೆಳಗಿ ದೇವಿಗೆ ನೈವೇದ್ಯ ಸಮರ್ಪಿಸಿದರು.

​ಭಕ್ತರಿಂದ ದಾಸೋಹ ವ್ಯವಸ್ಥೆ ಮತ್ತು ದೇವಿ ದರ್ಶನ

​ಪೂಜೆಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಈರೇಗೌಡ ವಂಶಸ್ಥರು ಹಾಗೂ ಶ್ರೀಮತಿ ರತ್ನಮ್ಮ ಹಾಗೂ ರಾಜಶೇಖರ ಶಾಸ್ತ್ರಿಗಳು ಮಾಡಾಳು ವತಿಯಿಂದ ವಿಶೇಷ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

​ಕಾರ್ಯಕ್ರಮದಲ್ಲಿ ಮಾಡಾಳು ಸೇರಿದಂತೆ ಸೀತಾಪುರ, ಕೊಪ್ಪಲು, ವೈಜಿಹಳ್ಳಿ, ದಿಬ್ಬೂರು, ಪಿ.ಹೊಸಳ್ಳಿ, ಕಿತ್ತನಕೆರೆ, ದೋಣನಕಟ್ಟೆ, ಬೊಮ್ಮಸಮುದ್ರ, ಕೆ.ಶಂಕರನಹಳ್ಳಿ, ಡಿ.ಎಂ.ಕುರ್ಕೆ, ಕುರ್ಕೆಸಸಿವಾಳ ಮುಂತಾದ ವಿವಿಧ ಗ್ರಾಮಗಳಿಂದ ಆಗಮಿಸಿದ ಹತ್ತಾರು ಭಕ್ತರು ದೇವಿ ದರ್ಶನ ಪಡೆದು ಕೃತಾರ್ಥರಾದರು.