ಬೆಂಗಳೂರು(kannadapost.com): ರಾಜ್ಯದ ಅರಣ್ಯ ಆಡಳಿತದಲ್ಲಿ ಮಹತ್ವದ ಬದಲಾವಣೆ ತಂದಿರುವ ಕರ್ನಾಟಕ ಸರ್ಕಾರ, ಏಳು ಭಾರತೀಯ ಅರಣ್ಯ ಸೇವೆ (IFS) ಹಾಗೂ ಇಬ್ಬರು ರಾಜ್ಯ ಅರಣ್ಯ ಸೇವೆ (SFS) ಅಧಿಕಾರಿಗಳು ಸೇರಿದಂತೆ ಒಟ್ಟು 9 ಹಿರಿಯ ಅರಣ್ಯಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಗುರುವಾರ (ನ.5) ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ವಯ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಶಿವಮೊಗ್ಗ, ಮಡಿಕೇರಿ, ಹಾಸನ ಹಾಗೂ ತುಮಕೂರು ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (DCF) ಹುದ್ದೆಗಳಲ್ಲಿ ಪ್ರಮುಖ ಸ್ಥಾನಪಲ್ಲಟ ಮಾಡಲಾಗಿದೆ.
ನಾಗರಹೊಳೆಗೆ ಸೌರಭ್ ಕುಮಾರ್ ಸಾರಥ್ಯ ಪ್ರಮುಖ ಬೆಳವಣಿಗೆಯಲ್ಲಿ, ಹಾಸನ ವಿಭಾಗದ ಡಿಸಿಎಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ 2019ನೇ ಬ್ಯಾಚ್ನ ಐಎಫ್ಎಸ್ ಅಧಿಕಾರಿ ಸೌರಭ್ ಕುಮಾರ್ ಅವರನ್ನು ಹುಣಸೂರಿನ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ನೂತನ ಡಿಸಿಎಫ್ ಹಾಗೂ ಕ್ಷೇತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಇಲ್ಲಿಯವರೆಗೆ ಈ ಹುದ್ದೆಯಲ್ಲಿದ್ದ 2017ನೇ ಬ್ಯಾಚ್ನ ಐಎಫ್ಎಸ್ ಅಧಿಕಾರಿ ಸೀಮಾ ಪಿ.ಎ. ಅವರನ್ನು ತುಮಕೂರು ವಿಭಾಗದ ಡಿಸಿಎಫ್ ಆಗಿ ಖಾಲಿ ಇದ್ದ ಸ್ಥಾನಕ್ಕೆ ವರ್ಗಾಯಿಸಲಾಗಿದೆ.
ಇನ್ನು, ಸೌರಭ್ ಕುಮಾರ್ ಅವರ ವರ್ಗಾವಣೆಯಿಂದ ತೆರವಾದ ಹಾಸನ ವಿಭಾಗದ ಡಿಸಿಎಫ್ ಹುದ್ದೆಗೆ ಚಿತ್ರದುರ್ಗ ಸಾಮಾಜಿಕ ಅರಣ್ಯ ವಿಭಾಗದಲ್ಲಿದ್ದ ಹರೀಶ್ ಕೆ. (IFS – 2021) ಅವರನ್ನು ನಿಯೋಜಿಸಲಾಗಿದೆ.
ಶಿವಮೊಗ್ಗ ಮತ್ತು ಮಡಿಕೇರಿ ವನ್ಯಜೀವಿ ವಿಭಾಗಗಳಲ್ಲಿ ಬದಲಾವಣೆ ಮಲೆನಾಡು ಮತ್ತು ಕೊಡಗು ಭಾಗದ ಅರಣ್ಯ ವಿಭಾಗಗಳಲ್ಲೂ ಸರಣಿ ವರ್ಗಾವಣೆಗಳನ್ನು ಮಾಡಲಾಗಿದೆ:
- ಪ್ರಸನ್ನ ಕೃಷ್ಣ ಪಟಗಾರ್ (IFS – 2015): ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಹುದ್ದೆಯಿಂದ ಮಡಿಕೇರಿಯ ಸಂಶೋಧನಾ ವಿಭಾಗದ ಡಿಸಿಎಫ್ ಆಗಿ ವರ್ಗಾವಣೆಗೊಂಡಿದ್ದಾರೆ.
- ರಾಘವೇಂದ್ರ ರಾವ್ ಎನ್.ಎಸ್. (IFS – 2021): ಶಿವಮೊಗ್ಗದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ (KFDC) ಡಿಸಿಎಫ್ ಮತ್ತು ವಿಭಾಗೀಯ ವ್ಯವಸ್ಥಾಪಕ ಹುದ್ದೆಯಿಂದ ಶಿವಮೊಗ್ಗ ವನ್ಯಜೀವಿ ವಿಭಾಗದ ನೂತನ ಡಿಸಿಎಫ್ ಆಗಿ ಪ್ರಸನ್ನ ಕೃಷ್ಣ ಪಟಗಾರ್ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
- ಭಾಗ್ಯಲಕ್ಷ್ಮಿ ಎಂ.ಸಿ. (SFS): ಮುನಿರಾಬಾದ್ನ ತುಂಗಭದ್ರಾ ಯೋಜನಾ ಪ್ರದೇಶದ (CADA) ಡಿಸಿಎಫ್ ಮತ್ತು ಉಪ ಆಡಳಿತಾಧಿಕಾರಿ ಹುದ್ದೆಯಿಂದ ಶಿವಮೊಗ್ಗ ಕೆಎಫ್ಡಿಸಿ ವಿಭಾಗದ ಡಿಸಿಎಫ್ ಮತ್ತು ವಿಭಾಗೀಯ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡಿದ್ದಾರೆ.
- ಕೆ.ಪಿ. ಗೋಪಾಲ್ (SFS): ಮಡಿಕೇರಿ ಅರಣ್ಯ ಸಂಚಾರಿ ದಳದ ಡಿಸಿಎಫ್ ಹುದ್ದೆಯಿಂದ ಮಡಿಕೇರಿ ವನ್ಯಜೀವಿ ವಿಭಾಗದ ಡಿಸಿಎಫ್ ಆಗಿ ಖಾಲಿ ಇದ್ದ ಹುದ್ದೆಗೆ ನೇಮಕಗೊಂಡಿದ್ದಾರೆ.
ಸ್ಥಳ ನಿಯುಕ್ತಿ ನಿರೀಕ್ಷೆಯಲ್ಲಿದ್ದವರಿಗೆ ಹುದ್ದೆ ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದ ಇಬ್ಬರು ಐಎಫ್ಎಸ್ ಅಧಿಕಾರಿಗಳಿಗೆ ಸರ್ಕಾರ ನೂತನ ಜವಾಬ್ದಾರಿ ನೀಡಿದೆ:
- ಶ್ರೀಪತಿ ಬಿ.ಎಸ್. (IFS – 2017): ಚಿಕ್ಕಮಗಳೂರಿನ ಕಾರ್ಯ ಯೋಜನೆ (Working Plan) ವಿಭಾಗದ ಡಿಸಿಎಫ್ ಆಗಿ ನೇಮಕ.
- ರಮೇಶ್ ಬಾಬು ಎನ್. (IFS – 2018): ಬೆಂಗಳೂರಿನ ಬಜೆಟ್ ಮತ್ತು ಆಡಿಟ್ ವಿಭಾಗದ ಡಿಸಿಎಫ್ ಆಗಿ ನಿಯೋಜನೆ.
ಮೇಲ್ದರ್ಜೆಯಿಂದ ಕೆಳದರ್ಜೆಗಿಳಿಸಲಾದ (Downgraded) ಮಡಿಕೇರಿ ಸಂಶೋಧನಾ ವಿಭಾಗ, ಚಿಕ್ಕಮಗಳೂರು ಕಾರ್ಯ ಯೋಜನೆ ವಿಭಾಗ, ಬೆಂಗಳೂರು ಬಜೆಟ್ ಮತ್ತು ಆಡಿಟ್ ವಿಭಾಗ ಹಾಗೂ ನಾಗರಹೊಳೆ ಕ್ಷೇತ್ರ ನಿರ್ದೇಶಕರ ಹುದ್ದೆಗಳನ್ನು ಐಎಫ್ಎಸ್ (ವೇತನ) ನಿಯಮಗಳು 2016ರ ನಿಯಮ 12ರ ಅಡಿಯಲ್ಲಿ ಬೆಂಗಳೂರಿನ ಕೇಂದ್ರ ಸ್ಥಾನದ ಡಿಸಿಎಫ್ ವೃಂದದ ಹುದ್ದೆಗೆ ಸ್ಥಾನಮಾನ ಮತ್ತು ಜವಾಬ್ದಾರಿಗಳಲ್ಲಿ ತತ್ಸಮಾನವೆಂದು ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಸನ್ನ ಕುಮಾರ್ ವಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.












