ಹಾಸನ: ಈಚೆಗೆ ಉತ್ತರಾಖಂಡ್ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸಮಾಜ ಸೇವಕ, ಉದ್ಯಮಿ ಬಾಚಿಹಳ್ಳಿ ಪ್ರತಾಪ್ ಗೌಡ ಅವರ ಕುಟುಂಬಕ್ಕೆ ಮತ್ತೊಂದ ಆಘಾತ ಉಂಟಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಪ್ರತಾಪ್ ಅವರ ತಂದೆ ನಿಂಗರಾಜು ಗುರುವಾರ ಕೊನೆಯುಸಿರೆಳೆದರು.
ಹಾಸನ ತಾಲೂಕಿನ ಜೋಡಿ ಕೃಷ್ಣಾಪುರದಲ್ಲಿ ಟೈಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ನಿಂಗರಾಜು ಅವರು ನಂತರ ಸಕಲೇಶಪುರ ತಾಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು.
ಅವರ ಪುತ್ರ ಪ್ರತಾಪ್ ಗೌಡ, ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿದ್ದವರು ಅಲ್ಲಿಯೇ ಪ್ರಭಾವಿ ಗುತ್ತಿಗೆದಾರರಾಗಿ ಬೆಳೆದಿದ್ದರು. ಉತ್ತರಾಖಂಡ್ ಹೆಲಿಕಾಪ್ಟರ್ ದುರಂತದಲ್ಲಿ ಅವರು ಮೃತಪಟ್ಟ ಸಂಗತಿಯನ್ನು ಮರಣಶಯ್ಯೆಯಲ್ಲಿದ್ದ ತಂದೆಯವರಿಗೆ ತಿಳಿಸಿರಲಿಲ್ಲ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಿಂಗರಾಜು ಅವರ ನಿಧನದಿಂದ ಈಗಷ್ಟೇ ಪ್ರತಾಪ್ ಅವರ ಸಾವಿನಿಂದ ಕಂಗೆಟ್ಟಿರುವ ಕುಟುಂಬಕ್ಕೆ ಮತ್ತೊಂದು ಆಘಾತ ಉಂಟು ಮಾಡಿದೆ.
ಶುಕ್ರವಾರ ಬಾಚಿಹಳ್ಳಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.












