ಹಾಸನ: ಪ್ರೇಮದ ಊರಲಿ ಎಫೆಕ್ಟ್- ಅವ್ಯವಸ್ಥೆ ನಿಯಂತ್ರಣಕ್ಕಾಗಿ ಶೂಟಿಂಗ್ ಸ್ಪಾಟ್ ಸೀಗೆ ಗುಡ್ಡಕ್ಕೆ ವಾಹನ ಸಂಚಾರ ನಿಷೇಧಿಸಿದ ಡಿಸಿ!

ಹಾಸನಾಂಬ ಜಾತ್ರೆ ಹಾಗೂ ಪ್ರವಾಸಿಗರ ದಟ್ಟಣೆ ಹಿನ್ನೆಲೆಯಲ್ಲಿ ಸೀಗೆಗುಡ್ಡದ ಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳುವ ಮೂರು ಮಾರ್ಗಗಳಲ್ಲಿ ನ.11 ರವರೆಗೆ ವಾಹನ ಸಂಚಾರ ನಿರ್ಬಂಧಿಸಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶಿಸಿದ್ದಾರೆ.

ಹಾಸನ (kannadapost.com): ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಾಲ್ಲೂಕಿನ ಸೀಗೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿರುವ ಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳುವ ಮಾರ್ಗಗಳಲ್ಲಿ ನವೆಂಬರ್ 11 ರವರೆಗೆ ಎಲ್ಲಾ ರೀತಿಯ ಖಾಸಗಿ ಹಾಗೂ ಪ್ರವಾಸಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.

ವಾಹನ ನಿಷೇಧಿತ ಅವಧಿಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಕಾಲ್ನಡಿಗೆಯಲ್ಲಿ ಮಾತ್ರ ಬೆಟ್ಟಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ.

​‘ಪ್ರೇಮದ ಊರಲಿ’ ಚಲನಚಿತ್ರ ಯಶಸ್ವಿಯಾದ ಬಳಿಕ ಮಳೆ ಮಲ್ಲೇಶ್ವರ ದೇವಾಲಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಹಿಂದೆ ಪ್ರತಿದಿನ ಸುಮಾರು 50 ಭಕ್ತರು ಆಗಮಿಸುತ್ತಿದ್ದ ದೇವಾಲಯಕ್ಕೆ ಪ್ರಸ್ತುತ ನಿತ್ಯ 5,000ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ನಡೆಯಲಿರುವ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರು ದೇವಿಯ ದರ್ಶನದ ಬಳಿಕ ಮಳೆ ಮಲ್ಲೇಶ್ವರ ದೇವಾಲಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆಯಿದೆ.

​ದೇವಸ್ಥಾನಕ್ಕೆ ತೆರಳುವ ರಸ್ತೆಯು ಅತ್ಯಂತ ಕಿರಿದಾಗಿದ್ದು, ಕಡಿದಾದ ಇಳಿಜಾರಿನಿಂದ ಕೂಡಿದೆ ಹಾಗೂ ರಸ್ತೆ ಬದಿಯಲ್ಲಿ ತಡೆಗೋಡೆ ಅಥವಾ ತಡೆ ಕಂಬಿಗಳಿಲ್ಲದ ಕಾರಣ ವಾಹನಗಳ ಸುರಕ್ಷಿತ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಾಹನ ಸಂಚಾರ ನಿರ್ಬಂಧಿಸುವಂತೆ ಗ್ರಾಮಸ್ಥರು, ಅರಣ್ಯ ಇಲಾಖೆ, ಹಾಸನ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಸಲ್ಲಿಸಿದ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

​ವಾಹನ ಸಂಚಾರ ನಿರ್ಬಂಧಿಸಲಾಗಿರುವ ಮೂರು ಮಾರ್ಗಗಳು:

  • ​ಬೇಲೂರು ಕಡೆಯಿಂದ ಕಲ್ಕೆರೆ ಗ್ರಾಮದ ಮೂಲಕ ವೀರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ.
  • ​ಹಳೇಬೀಡು ಕಡೆಯಿಂದ ಸೀಗೆ ಮತ್ತು ವೀರಾಪುರ ಗ್ರಾಮದ ಮೂಲಕ ಸಾಗುವ ರಸ್ತೆ.
  • ​ಗೋಳೇನಹಳ್ಳಿ ಮಾರ್ಗವಾಗಿ ಸೀಗೆಗುಡ್ಡಕ್ಕೆ ತೆರಳುವ ರಸ್ತೆ.