ಸಂಜೆ ಬಸ್‌ಗಳಿಲ್ಲದೆ ಬಾಳುಪೇಟೆಯಲ್ಲಿ ಪ್ರಯಾಣಿಕರ ಪರದಾಟ; ವಿದ್ಯಾರ್ಥಿಗಳು, ಸಾರ್ವಜನಿಕರ ಸಂಕಷ್ಟಕ್ಕೆ ಪರಿಹಾರವೆಲ್ಲಿ?

  • ಸಕಲೇಶಪುರ: ಕೊಡ್ಲಿಪೇಟೆ, ಹೆತ್ತೂರು, ಮಾಗಲು, ಹೊಸಕೋಟೆ, ಎಸಳೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಮಹಿಳೆಯರು, ಸರ್ಕಾರಿ ಹಾಗೂ ಖಾಸಗಿ ನೌಕರರು ಮತ್ತು ಇತರ ಪ್ರಯಾಣಿಕರು ಆಲೂರು, ಹಾಸನ ಹಾಗೂ ಸಕಲೇಶಪುರಕ್ಕೆ ಸಂಚರಿಸುತ್ತಿದ್ದಾರೆ. ಆದರೆ, ಸಂಜೆ ವೇಳೆಯಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ಬಾಳುಪೇಟೆಯಲ್ಲಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

ಸಮಯಕ್ಕೆ ಸರಿಯಾಗಿ ಬಸ್ ಸಂಚಾರಕ್ಕೆ ಆಗ್ರಹ

ಗ್ರಾಮೀಣ ಪ್ರದೇಶಗಳಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ಪ್ರಯಾಣಿಸುವ ಜನರಿಗೆ ನಿಗದಿತ ಸಮಯಕ್ಕೆ ಬಸ್‌ಗಳು ಲಭ್ಯವಾಗುವುದು ಅತ್ಯಗತ್ಯವಾಗಿದೆ. ಆದರೆ, ಸಂಜೆ ವೇಳೆಯಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ತಮ್ಮ ಊರುಗಳಿಗೆ ತೆರಳಲು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ವಿಶೇಷವಾಗಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ದಿನನಿತ್ಯ ಕೆಲಸ ಮುಗಿಸಿ ಮನೆಗೆ ಮರಳುವ ನೌಕರರು ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ನಿಗದಿಪಡಿಸಿರುವ ಬಸ್‌ಗಳನ್ನು ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಶಾಸಕರು, ಸಾರಿಗೆ ಅಧಿಕಾರಿಗಳು ಗಮನಹರಿಸಲು ಮನವಿ

ಸಕಲೇಶಪುರ ಸಾರಿಗೆ ಘಟಕದ ಮುಖ್ಯಸ್ಥರು ಕೊಡ್ಲಿಪೇಟೆ, ಹೆತ್ತೂರು, ಮಾಗಲು, ಹೊಸಕೋಟೆ, ಎಸಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ನಿಗದಿಪಡಿಸಿರುವ ಬಸ್‌ಗಳನ್ನು ಸರಿಯಾದ ಸಮಯಕ್ಕೆ ಕಾರ್ಯಾಚರಣೆಗೊಳಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಅದೇ ರೀತಿ, ಸಂಬಂಧಪಟ್ಟ ಶಾಸಕರು ಈ ಸಮಸ್ಯೆಯ ಬಗ್ಗೆ ಗಮನಹರಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ನೌಕರರ ಪ್ರಯಾಣದ ಸಂಕಷ್ಟಕ್ಕೆ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.