ಮಾಡಾಳು/ಅರಸೀಕೆರೆ(kannadapost.com): ಭಾರತೀಯ ಸಂಸ್ಕೃತಿಯ ಜೀವಾಳವಾಗಿರುವ ಹಬ್ಬಗಳು ಧಾರ್ಮಿಕ ನಂಬಿಕೆ, ಸಾಂಸ್ಕೃತಿಕ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಸೆಯುವ ಸೇತುವೆಗಳಾಗಿವೆ. ಅಧರ್ಮದ ವಿರುದ್ಧ ಧರ್ಮವನ್ನು ಸಾರುವ ಸಂಕೇತವೇ ನವರಾತ್ರಿ ಹಾಗೂ ಶಕ್ತಿ ದೇವತೆಯ ಆರಾಧನೆ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು ಹೇಳಿದರು.
ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಶಿವಬಸವ ಕುಮಾರಾಶ್ರಮದ ರಸ್ತೆಬದಿಯಲ್ಲಿರುವ ಮೂಲಸ್ಥಾನ ಶ್ರೀ ಸ್ವರ್ಣಗೌರಿ ದೇವಾಲಯದ ಮುಂಭಾಗ ಗುರುವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಭಕ್ತರಿಗೆ ಆಶೀರ್ವಚನ ನೀಡಿದರು.
ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಂಕಲ್ಪದಂತೆ ಮಾಡಾಳು ಗ್ರಾಮದಲ್ಲಿ ಇದೇ ಮೊದಲ ಬಾರಿಗೆ 12 ದಿನಗಳ ದಸರಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯನ್ನು ಪಟ್ಟದಲ್ಲಿ ಪ್ರತಿಷ್ಠಾಪಿಸಿ, ಪ್ರತಿದಿನ ದೇವಿ ಪಾರಾಯಣ ನಡೆಸಲಾಯಿತು.
ಮಾಡಾಳು ಮೂಲಸ್ಥಾನ ದೇವಾಲಯದ ಮುಂಭಾಗದಲ್ಲಿ ಲೋಕಕಲ್ಯಾಣ ಹಾಗೂ ಭಕ್ತರ ಒಳಿತಿಗಾಗಿ ಆಯೋಜಿಸಿದ್ದ ಈ ನಾಡಹಬ್ಬವು ಜನಮನದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯವನ್ನು ಬೆಳೆಸುವ ಉದ್ದೇಶ ಹೊಂದಿದೆ ಎಂದು ಶ್ರೀ ಚೇತನ್ ಮರಿದೇವರು ತಿಳಿಸಿದರು.
ಬನ್ನಿ ಪೂಜೆ, ಅಂಬುಛೇದನದೊಂದಿಗೆ ಮಹೋತ್ಸವಕ್ಕೆ ತೆರೆ
ಕಾರ್ಯಕ್ರಮಕ್ಕೂ ಮುನ್ನ ಅರ್ಚಕರು ಜಗನ್ಮಾತೆ ಹಾಗೂ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರಿಗೆ ಮಹಾಮಂಗಳಾರತಿ ಮತ್ತು ಕರ್ಪೂರಾರತಿ ನೆರವೇರಿಸಿದರು. ಬಳಿಕ ದೇವಾಲಯದ ಮುಂಭಾಗದಲ್ಲಿ ಸಿದ್ಧಪಡಿಸಿದ್ದ ಬಾಳೆಕಂದು ಹಾಗೂ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಲಾಯಿತು.
ನಂತರ ಸಂಪ್ರದಾಯದಂತೆ ಅಂಬುಛೇದನ ನೆರವೇರಿಸಿ, ಬನ್ನಿ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು
ಇದರೊಂದಿಗೆ ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣಗೌರಿ ದೇವಾಲಯದಲ್ಲಿ 12 ದಿನಗಳಿಂದ ನಡೆಯುತ್ತಿದ್ದ ದಸರಾ ಮಹೋತ್ಸವವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.












