- ಹಾಸನ: ನಗರದ ಸ್ಕಾಲರ್ಸ್ ಇಂಟರ್ನ್ಯಾಷನಲ್ ಶಾಲೆ ಹಾಗೂ ಸ್ಕಾಲರ್ಸ್ ಪಿಯು ಕಾಲೇಜಿನಲ್ಲಿ ನವರಾತ್ರಿ ಮಹೋತ್ಸವದ ಒಂಬತ್ತನೇ ದಿನವಾದ ಮಹಾ ನವಮಿಯನ್ನು ಸಂಭ್ರಮ ಮತ್ತು ವೈಭವದಿಂದ ಆಚರಿಸಲಾಯಿತು.
ಮಹಾ ನವಮಿಯ ಅಂಗವಾಗಿ ಸರ್ವಸಿದ್ಧಿ, ಸಮೃದ್ಧಿ ಹಾಗೂ ಜ್ಞಾನದ ಪ್ರತೀಕವಾದ ಶ್ರೀ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಮಮತಾ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಶಾಲೆ ಮತ್ತು ಕಾಲೇಜಿನ ಮಹಿಳಾ ಸಿಬ್ಬಂದಿ ವರ್ಗದವರು ನಿಗದಿಪಡಿಸಿದ ನವಿಲು ಹಸಿರು (ಪೀಕಾಕ್ ಗ್ರೀನ್) ಬಣ್ಣದ ಉಡುಪುಗಳನ್ನು ಧರಿಸಿ ಸಂಭ್ರಮದಲ್ಲಿ ಪಾಲ್ಗೊಂಡರು.
ಶಾಲಾ ಆವರಣದಲ್ಲಿ ಒಂದಾಗಿ ಸೇರಿದ ‘ಸ್ಕಾಲರ್ಸ್ ಕುಟುಂಬ’ದ ಸದಸ್ಯರು ನವರಾತ್ರಿಯ ಕೊನೆಯ ದಿನದ ಆಚರಣೆಗೆ ವಿಶೇಷ ಮೆರುಗು ನೀಡಿದರು. ಮಹಿಳಾ ಸಿಬ್ಬಂದಿಯ ಏಕತೆಯೊಂದಿಗೆ ನಡೆದ ಈ ಆಚರಣೆಯು ಸಂಸ್ಥೆಯ ಆವರಣದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಮಮತಾ ಚಂದ್ರಶೇಖರ್ ಅವರು, ಮಾತಾ ಸಿದ್ಧಿದಾತ್ರಿ ದೇವಿಯ ದಿವ್ಯ ಆಶೀರ್ವಾದವು ಪ್ರತಿಯೊಬ್ಬರ ಕನಸುಗಳನ್ನು ನನಸಾಗಿಸಿ, ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಶುಭವನ್ನು ತರಲಿ ಎಂದು ಹಾರೈಸಿದರು.
ಧಾರ್ಮಿಕ ಭಕ್ತಿ, ಸಂಭ್ರಮ ಮತ್ತು ಸೌಹಾರ್ದದೊಂದಿಗೆ ಸ್ಕಾಲರ್ಸ್ ಇಂಟರ್ನ್ಯಾಷನಲ್ ಶಾಲೆ ಹಾಗೂ ಸ್ಕಾಲರ್ಸ್ ಪಿಯು ಕಾಲೇಜಿನಲ್ಲಿ ನವರಾತ್ರಿ ಮಹೋತ್ಸವದ ಸಮಾರೋಪ ನಡೆಯಿತು.












