ಹಾಸನ (kannadapost.com): ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಅಧಿದೇವತೆ ‘ಹಾಸನಾಂಬೆ’ಯ ಜಾತ್ರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ಶ್ರದ್ಧಾ, ಭಕ್ತಿ ಹಾಗೂ ಸಡಗರ-ಸಂಭ್ರಮದಿಂದ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ಮುಂಬರುವ ಹಾಸನಾಂಬ ಜಾತ್ರಾ ಮಹೋತ್ಸವದ ರೂಪುರೇಷೆ ಹಾಗೂ ಸಾರ್ವಜನಿಕ ದರ್ಶನದ ದಿನಾಂಕಗಳ ಕುರಿತು ಜಿಲ್ಲಾಧಿಕಾರಿಗಳು ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬಾಗಿಲು ತೆರೆಯುವ ಮತ್ತು ದರ್ಶನದ ದಿನಾಂಕಗಳ ವಿವರ:
- ಬಾಗಿಲು ಓಪನ್: ಅಕ್ಟೋಬರ್ 29, ಗುರುವಾರದಂದು ಮಧ್ಯಾಹ್ನ 12 ಗಂಟೆಗೆ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗುವುದು. ಆದರೆ, ಮೊದಲ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ.
- ಸಾರ್ವಜನಿಕ ದರ್ಶನ: ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೆ ಸತತ 12 ದಿನಗಳ ಕಾಲ ಭಕ್ತರಿಗೆ ಹಾಸನಾಂಬ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
- ಬಾಗಿಲು ಬಂದ್: ನವೆಂಬರ್ 11 ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುವುದು.
ಸೆ. 26ಕ್ಕೆ ಪೋಸ್ಟರ್, ವೆಬ್ಸೈಟ್ ಬಿಡುಗಡೆ:
ಜಾತ್ರಾ ಮಹೋತ್ಸವದ ಪ್ರಚಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ. ಶಿವಲಿಂಗೇಗೌಡ ಅವರು ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಭಕ್ತರ ಅನುಕೂಲಕ್ಕಾಗಿ ವಿಶೇಷ ವೆಬ್ಸೈಟ್ ಅನ್ನು ಸಹ ಲಾಂಚ್ ಮಾಡಲಿದ್ದಾರೆ.
ಬರದ ಛಾಯೆಯ ನಡುವೆಯೂ ಸಡಗರದ ಆಚರಣೆ:
ಪ್ರಸ್ತುತ ವರ್ಷ ಹಾಸನ ಜಿಲ್ಲೆಯ ಏಳೂ ತಾಲ್ಲೂಕುಗಳನ್ನು ‘ಬರಪೀಡಿತ ತಾಲ್ಲೂಕುಗಳು’ ಎಂದು ಸರ್ಕಾರ ಘೋಷಿಸಿದೆ. ಬರದ ಛಾಯೆ ಇರುವುದರಿಂದ ಅತಿಯಾದ ಅದ್ಧೂರಿತನ ಇರದಿದ್ದರೂ, ಸಂಪ್ರದಾಯಬದ್ಧವಾಗಿ, ಶ್ರದ್ಧಾ-ಭಕ್ತಿ ಹಾಗೂ ಸಡಗರದಿಂದ ಜಾತ್ರಾ ಮಹೋತ್ಸವವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆಕರ್ಷಕ ಕಾರ್ಯಕ್ರಮಗಳ ಆಯೋಜನೆ:
ಜಾತ್ರಾ ಮಹೋತ್ಸವವನ್ನು ಸುಗಮವಾಗಿ ನಡೆಸಲು ಈಗಾಗಲೇ ಅನೇಕ ಸಮಿತಿಗಳನ್ನು ರಚಿಸಲಾಗಿದ್ದು, ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದರ್ಶನಕ್ಕೆ ಬರುವ ಭಕ್ತರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಆಹಾರ ಮೇಳ, ಚಿತ್ರ ಸಂತೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ವೈಭವದಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.












