ಹಾಸನ: ‘ಸರ್ಕಾರ ಅಲುಗಾಡಿಸುವ ದಾಖಲೆ ಇದ್ದರೆ ಅಮೆರಿಕಾಗೆ ಹೋಗ್ತಿದ್ರಾ?’ ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

ಹಾಸನ (kannadapost.com): ವಿಜಯದಶಮಿ ಹಬ್ಬದಂದು ರಾಜ್ಯ ಸರ್ಕಾರದ ವಿರುದ್ಧ ಮಹತ್ವದ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಚಿವ ಎನ್. ಚಲುವರಾಯಸ್ವಾಮಿ ತೀವ್ರವಾಗಿ ತಿರುಗೇಟು ನೀಡಿದ್ದಾರೆ.

​ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಐದಳ್ಳಕಾವಲ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಗರಂ ಆದ ಸಚಿವರು, ಕುಮಾರಸ್ವಾಮಿ ಹಾಗೂ ಅವರನ್ನು ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧವೂ ತೀವ್ರ ಅಸಮಾಧಾನ ಹೊರಹಾಕಿದರು.

ಮಾಧ್ಯಮಗಳಿಗೆ ಟಾಸ್ಕ್ ಕೊಟ್ಟಿದ್ದಾರಾ?

ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಸಿಡಿಮಿಡಿಗೊಂಡ ಚೆಲುವರಾಯಸ್ವಾಮಿ, “ಥೂ ಅದೇನ್ ರೀ.. ನಿಮಗೇನು ಟಾಸ್ಕ್ ಕೊಟ್ಟಿದ್ದಾರಾ? ದಿನಬೆಳಗಾದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅವರದ್ದೇ ನ್ಯೂಸ್ ಓಡಬೇಕು ಅಂತ ನಿಮ್ಮ ಯಜಮಾನರುಗಳು ನಿಮಗೆ ಟಾಸ್ಕ್ ಕೊಟ್ಟಿದ್ದಾರಾ? ನಾನೋ, ಶಿವಲಿಂಗೇಗೌಡ್ರೋ ಏನಾದರೂ ಹೇಳಿದರೆ ನೀವು ಈ ರೀತಿ ಪದೇ ಪದೇ ಕೇಳ್ತೀರಾ? ಅವರ (ಕುಮಾರಸ್ವಾಮಿ) ಬಗ್ಗೆ ನಿಮಗೆ ಯಾಕಷ್ಟೊಂದು ಪ್ರೀತಿ? ನಮ್ಮ ಬಗ್ಗೆಯೂ ಸ್ವಲ್ಪ ಪ್ರೀತಿ ಇಟ್ಟುಕೊಳ್ಳಿ,” ಎಂದು ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡರು.

ದಾಖಲೆ ಇದ್ದರೆ ಅಮೆರಿಕಾಗೆ ಯಾಕೆ ಹೋಗ್ತಿದ್ರು?

“ನಿರ್ಲಕ್ಷ್ಯ ಮಾಡಬೇಕಾದ ವಿಚಾರವನ್ನು ನೀವು ಪದೇ ಪದೇ ಕೇಳುತ್ತಿದ್ದೀರಿ. 2023 ರಿಂದಲೂ ಅವರು ಪೆನ್‌ಡ್ರೈವ್, ದಾಖಲೆ ಅಂತ ಹೇಳುತ್ತಲೇ ಇದ್ದಾರೆ. ಅದರಲ್ಲಿ ಎಷ್ಟು ಸಕ್ಸಸ್ ಆಗಿವೆ ಅನ್ನೋದು ನಮಗೆ ಗೊತ್ತಿಲ್ಲ. ದೇಶನೇ ಅಲ್ಲೋಲ ಕಲ್ಲೋಲ ಆಗುವ, ಸರ್ಕಾರವೇ ಅಲುಗಾಡುವಂತಹ ವಿಚಾರ ಅವರ ಬಳಿ ಇದ್ದಿದ್ದರೆ ಅಮೆರಿಕಾಗೆ ಹೋಗ್ತಿದ್ರಾ? ಅಮೆರಿಕಾ ಪ್ರವಾಸ ಕ್ಯಾನ್ಸಲ್ ಮಾಡಿ, ಇಲ್ಲಿಯೇ ಉಳಿದುಕೊಂಡು ಅವತ್ತೇ ಆ ಬಾಂಬ್ ಬ್ಲಾಸ್ಟ್ ಮಾಡಬೇಕಿತ್ತಲ್ಲವೇ?” ಎಂದು ಕುಮಾರಸ್ವಾಮಿ ಕಾಲೆಳೆದರು.

​”ಅವರು ಏತಕ್ಕೆ ಆ ರೀತಿ ಹೇಳಿದ್ದಾರೆ, ಹಿಂದಿನ ಇತಿಹಾಸ ನೋಡಿ. ಅವರು ಹೇಳಿದ್ದೆಲ್ಲಾ ಪೊಳ್ಳಾಗುತ್ತಿವೆ ಎಂದು ನೀವೇ ಅವರನ್ನು ಪ್ರಶ್ನೆ ಮಾಡಬೇಕು,” ಎಂದು ಮಾಧ್ಯಮಗಳಿಗೆ ಮರುಪ್ರಶ್ನೆ ಹಾಕಿದರು.

ನಿದ್ದೆ ಕೆಡಿಸಲಿ, ಯಾರು ಬೇಡ ಅಂದಿದ್ದಾರೆ?

“ಅವರು ದಾಖಲೆ ಬಿಡುಗಡೆ ಮಾಡಬಾರದು ಅಂತ ನಾವೇನಾದರೂ ಹೇಳಿದ್ದೀವಾ? ಸರ್ಕಾರದಿಂದ ಸ್ಟೇ (ತಡೆಯಾಜ್ಞೆ) ತಂದಿದ್ದೀವಾ? ನನ್ನ ಕೈ ಮುಗಿಯುತ್ತೇನೆ, ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡಿ. ಅವರು ದಾಖಲೆ ಬಿಡುಗಡೆ ಮಾಡಿ ನಮ್ಮ ನಿದ್ದೆ ಕೆಡಿಸುವುದಾದರೆ ಕೆಡಿಸಲಿ, ಅದನ್ನು ಶಾಶ್ವತವಾಗಿ ಮಾಡಲಿ. ಅವರ ಹೇಳಿಕೆಯನ್ನು ನಾನು, ಮುಖ್ಯಮಂತ್ರಿಗಳು ಹಾಗೂ ನಮ್ಮ ಬಹಳ ಜನ ಸಚಿವರು ಸ್ವಾಗತ ಮಾಡಿದ್ದೇವೆ. ನಾವು ಇಲ್ಲಿ ಒಳ್ಳೆಯ ಕೆಲಸಕ್ಕೆ ಬಂದಿದ್ದೇವೆ, ಅದನ್ನು ಬಿಟ್ಟು ಸುಮ್ಮನೆ ಅವರ ಬಗ್ಗೆ ಯಾಕೆ ಮಾತನಾಡುತ್ತೀರಿ,” ಎಂದು ಅಸಮಾಧಾನದಿಂದಲೇ ಪ್ರತಿಕ್ರಿಯಿಸಿ ಅಲ್ಲಿಂದ ತೆರಳಿದರು.