12.4 C
Munich
Home Uncategorized ಹಾಸನ: ಕಾರಿನ EMI ಬಾಕಿ- ಫೈನಾನ್ಸ್ ಕಿರುಕುಳಕ್ಕೆ ಬಲಿಯಾದ ತಂದೆ, ಅನಾಥನಾದ ಮಗ!

ಹಾಸನ: ಕಾರಿನ EMI ಬಾಕಿ- ಫೈನಾನ್ಸ್ ಕಿರುಕುಳಕ್ಕೆ ಬಲಿಯಾದ ತಂದೆ, ಅನಾಥನಾದ ಮಗ!

ಹಾಸನ (kannadapost.com): ಕಾರಿನ ಸಾಲದ ಕೇವಲ ಎರಡು ಕಂತುಗಳನ್ನು (EMI) ಕಟ್ಟದಿದ್ದಕ್ಕೆ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಯುವಕನೋರ್ವ ಕಳೆನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ನೈಗೆರೆ ಗ್ರಾಮದಲ್ಲಿ ನಡೆದಿದೆ.

​ಮೃತ ಯುವಕನನ್ನು ನೈಗೆರೆ ಗ್ರಾಮದ ಗಿರೀಶ (28) ಎಂದು ಗುರುತಿಸಲಾಗಿದೆ.

ಸಾಲ ಮಾಡಿ ಕಾರು ಖರೀದಿ; 2 ತಿಂಗಳ ಕಂತು ಬಾಕಿ

ಗಿರೀಶ ಅವರು ಮಹೀಂದ್ರ ಫೈನಾನ್ಸ್‌ನಿಂದ (Mahindra Finance) ಸಾಲ ಪಡೆದು KA-13-AA-3665 ನೋಂದಣಿ ಸಂಖ್ಯೆಯ ಸ್ವಿಫ್ಟ್ ಡಿಸೈರ್ (Swift Dzire) ಕಾರನ್ನು ಖರೀದಿಸಿದ್ದರು. ಕಳೆದ ಒಂದು ವರ್ಷದಿಂದ ಸಾಲದ ಕಂತುಗಳನ್ನು ಅವರು ತಪ್ಪದೇ ಸರಿಯಾಗಿ ಕಟ್ಟುತ್ತಿದ್ದರು. ಆದರೆ, ಇತ್ತೀಚೆಗೆ ಆರ್ಥಿಕ ಸಮಸ್ಯೆಯಿಂದಾಗಿ ಕಳೆದ ಕೇವಲ ಎರಡು ತಿಂಗಳ ಕಂತುಗಳನ್ನು ಕಟ್ಟಲಾಗದೆ ಬಾಕಿ ಉಳಿಸಿಕೊಂಡಿದ್ದರು.

ಫೈನಾನ್ಸ್ ಸಿಬ್ಬಂದಿ ಕಿರುಕುಳದ ಆರೋಪ:

ಎರಡು ತಿಂಗಳ ಕಂತು ಬಾಕಿ ಉಳಿಸಿಕೊಂಡಿದ್ದಕ್ಕೆ ಫೈನಾನ್ಸ್ ಸಿಬ್ಬಂದಿ ನಿರಂತರವಾಗಿ ಫೋನ್ ಮಾಡಿ ಹಾಗೂ ಮನೆ ಬಳಿ ಬಂದು ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಸಿಬ್ಬಂದಿಯ ಈ ಕಿರುಕುಳ ಹಾಗೂ ಅವಮಾನದಿಂದ ತೀವ್ರ ಮನನೊಂದಿದ್ದ ಗಿರೀಶ, ಮನೆಯಲ್ಲಿಯೇ ಕಳೆನಾಶಕ (ವಿಷ) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

​ಯುವಕನ ಸಾವಿಗೆ ನೇರ ಕಾರಣರಾದ ಫೈನಾನ್ಸ್ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.

ಅನಾಥವಾದ ಮಗು:

ಈ ಘಟನೆಯಿಂದಾಗಿ ಗಿರೀಶ ಅವರ ಪುಟ್ಟ ಮಗುವೊಂದು ತಬ್ಬಲಿಯಾಗಿದೆ. ಮೂರ್ನಾಲ್ಕು ವರ್ಷಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಿರೀಶ ಅವರ ಪತ್ನಿ ಕೂಡ ಇದೇ ರೀತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಇಲ್ಲದೆ ಬೆಳೆಯುತ್ತಿದ್ದ ಮಗುವಿಗೆ ಇದೀಗ ತಂದೆಯೂ ಸಾವನ್ನಪ್ಪಿರುವುದರಿಂದ ಮಗು ಸಂಪೂರ್ಣ ಅನಾಥವಾದಂತಾಗಿದೆ.

​ಈ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಅರಕಲಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲ ವಸೂಲಾತಿ ನೆಪದಲ್ಲಿ ಫೈನಾನ್ಸ್ ಕಂಪನಿಗಳು ನೀಡುವ ಕಿರುಕುಳವನ್ನು ತಡೆಯಲು ಸರ್ಕಾರ ಯಾವ ರೀತಿಯ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು ಎಂದು ನೀವು ಭಾಭಾವಿಸುತ್ತೀರಾ?

error: Content is protected !!