- ಮಾಡಾಳು ಮೂಲಸ್ಥಾನ ಸ್ವರ್ಣ ಗೌರಿ ದೇವಿಯ ಕೃಪೆಯಿಂದ ಈ ಕ್ಷೇತ್ರವು ಪವಿತ್ರ ಧಾರ್ಮಿಕ ಯಾತ್ರಾಸ್ಥಳವಾಗಿ ಹೊರಹೊಮ್ಮಲಿದೆ ಎಂದು ಹಾರನಹಳ್ಳಿ ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದಿದ್ದಾರೆ.
ಅರಸೀಕೆರೆ (kannadapost.com): ತನ್ನ ಇಚ್ಛೆಯಂತೆಯೇ ಭವ್ಯ ಆಲಯವನ್ನು ನಿರ್ಮಿಸಿಕೊಂಡಿರುವ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ದೇವಿಯು ಮುಂದಿನ ದಿನಗಳಲ್ಲಿ ನಂಬಿ ಬರುವ ಸಮಸ್ತ ಭಕ್ತ ಸಂಕುಲವನ್ನು ಉದ್ದರಿಸಲಿದ್ದು, ಈ ಗ್ರಾಮವು ನಾಡಿನ ಪವಿತ್ರ ಧಾರ್ಮಿಕ ಯಾತ್ರಾಸ್ಥಳವಾಗಿ ಹೊರಹೊಮ್ಮಲಿದೆ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿ ಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ಮಾಡಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ದೇವಾಲಯದ ಲೋಕಾರ್ಪಣೆಯ ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಪೂಜ್ಯ ಕೋಡಿ ಶ್ರೀಗಳನ್ನು ಗ್ರಾಮಸ್ಥರು, ಗಣ್ಯರು ಹಾಗೂ ಭಕ್ತವೃಂದದವರು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಸ್ವಾಗತಿಸಿದರು. ಇದೇ ವೇಳೆ ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.
ಭಕ್ತರ ಬಾಳಿಗೆ ನಂದಾದೀಪವಾಗಲಿದೆ ಈ ಜ್ಯೋತಿ
ಬಳಿಕ ಭಕ್ತರನ್ನುದ್ದೇಶಿಸಿ ದಿವ್ಯ ಆಶೀರ್ವಚನ ನೀಡಿದ ಕೋಡಿ ಶ್ರೀಗಳು, “ಶ್ರೀ ಸ್ವರ್ಣ ಗೌರಮ್ಮ ದೇವಿಯು ಅದ್ಭುತ ಶಕ್ತಿ ದೇವತೆಯಾಗಿದ್ದಾಳೆ. ಹಾರೋಹಳ್ಳಿ ಕೋಡಿಮಠದ ಆದ್ಯ ಕರ್ತೃಗಳಾದ ಶ್ರೀ ನೀಲಮ್ಮಜ್ಜಯ್ಯ ಹಾಗೂ ಶ್ರೀ ಶಿವಲಿಂಗ ಸ್ವಾಮೀಜಿಯವರ ಕೃಪಾಶೀರ್ವಾದ ಶಕ್ತಿಯು ಈ ದೇವಾಲಯದ ಮೂಲಕ ಜಗಜ್ಯೋತಿಯಾಗಿ ಬೆಳಗಲಿದೆ. ಬದುಕಿನ ನಾನಾ ಸಂಕಷ್ಟಗಳಿಂದ ನೊಂದು-ಬೆಂದು ಬರುವ ಭಕ್ತರ ಪಾಲಿಗೆ ಈ ಶಕ್ತಿ ಕ್ಷೇತ್ರವು ನಂದಾದೀಪವಾಗಿ ಅವರ ಮನೆ ಮತ್ತು ಮನಗಳನ್ನು ಸದಾ ಬೆಳಗಲಿದೆ,” ಎಂದು ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕುಪ್ಪೂರು ಗದ್ದಿಗೆ ಮಠದ ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಶ್ರೀ ಸ್ವರ್ಣ ಗೌರಮ್ಮ ದೇವಿ ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸಮಿತಿಯ ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.












