- ಹಾಸನ ನಗರದ ಉದಯಗಿರಿ ಬಡಾವಣೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಸಿಲಿಂಡರ್ ಸ್ಪೋಟಗೊಂಡು ತಾಯಿ ಹಾಗೂ ಮಗಳಿಗೆ ಗಂಭೀರ ಗಾಯಗಳಾಗಿವೆ. ಸ್ಪೋಟದ ರಭಸಕ್ಕೆ ಮನೆಯ ಮೇಲ್ಚಾವಣಿ ಹಾರಿಹೋಗಿದೆ.
ಹಾಸನ (kannadapost.com): ಹಾಸನ ನಗರದ ಉದಯಗಿರಿ ಬಡಾವಣೆಯಲ್ಲಿ ಭೀಕರ ಅಡುಗೆ ಸಿಲಿಂಡರ್ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ ತಾಯಿ ಮತ್ತು ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಿವ್ಯಮಣಿ (55) ಹಾಗೂ ಅವರ ಮಗಳು ಮಾಲತಿ (25) ಗಾಯಗೊಂಡ ದುರ್ದೈವಿಗಳಾಗಿದ್ದು, ಇಬ್ಬರನ್ನೂ ತಕ್ಷಣವೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ:
ಉದಯಗಿರಿ ಬಡಾವಣೆಯಲ್ಲಿರುವ ಪಶು ವೈದ್ಯ ನಾಗೇಂದ್ರ ಅವರ ಮನೆಯಲ್ಲಿ ದಿಲೀಪ್ ಎಂಬುವವರು ಬಾಡಿಗೆಗೆ ವಾಸವಿದ್ದರು. ಇಂದು ರಾತ್ರಿ ಮನೆಯಲ್ಲಿ ದಿವ್ಯಮಣಿ ಹಾಗೂ ಮಾಲತಿ ಅಡುಗೆ ಮಾಡುತ್ತಿದ್ದಾಗ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡಿದೆ.
ಸ್ಪೋಟದ ರಭಸ ಎಷ್ಟು ತೀವ್ರವಾಗಿತ್ತೆಂದರೆ, ಮನೆಯ ಛಾವಣಿಯೇ ಸಂಪೂರ್ಣವಾಗಿ ಹಾರಿಹೋಗಿದ್ದು, ಅಕ್ಕಪಕ್ಕದ ಮನೆಯವರು ಬೆಚ್ಚಿಬಿದ್ದಿದ್ದಾರೆ. ಸ್ಪೋಟದ ಸದ್ದಿಗೆ ಓಡಿಬಂದ ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ: ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.












