- ಕಳ್ಳರು ಚಿನ್ನ, ಹಣ ಕದಿಯೋದು ಸಾಮಾನ್ಯ. ಆದರೆ ಸಕಲೇಶಪುರದ ಬನವಾಸೆ ಗ್ರಾಮದಲ್ಲಿ ಕಳ್ಳರು 50 ಮೀಟರ್ ಎತ್ತರದ ಇಡೀ ಮೊಬೈಲ್ ಟವರ್ ಅನ್ನೇ ಕದ್ದೊಯ್ದಿದ್ದಾರೆ! ಜಿಟಿಎಲ್ ಕಂಪನಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲು.
ಸಕಲೇಶಪುರ: ಕಳ್ಳರು ಬೈಕ್, ಕಾರು, ಚಿನ್ನಾಭರಣ ಅಥವಾ ಹಣ ಕದಿಯುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ಕಳ್ಳರು ಇಡೀ ‘ಮೊಬೈಲ್ ಟವರ್’ ಅನ್ನೇ ಎಗರಿಸಿದ್ದಾರೆ! ಹೌದು, ಕೆಲ ತಿಂಗಳ ಹಿಂದೆ ಬಿಹಾರದಲ್ಲಿ ನಡೆದಿದ್ದ ಇಂತಹದ್ದೇ ಒಂದು ವಿಚಿತ್ರ ಕಳ್ಳತನ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಈಗ ಅದೇ ಮಾದರಿಯ ಹೈಟೆಕ್ ಕಳ್ಳತನ ನಮ್ಮ ಕರ್ನಾಟಕದ ಸಕಲೇಶಪುರ ತಾಲೂಕಿನ ಬನವಾಸೆಯಲ್ಲಿ ನಡೆದಿದೆ.
ಪ್ರಕರಣದಲ್ಲಿ ಕಳ್ಳರು ರಾತ್ರೋರಾತ್ರಿ 50 ಮೀಟರ್ ಎತ್ತರದ ಬೃಹತ್ ಮೊಬೈಲ್ ಟವರ್ ಮತ್ತು ಅದರ ಉಪಕರಣಗಳನ್ನು ಬಿಚ್ಚಿಕೊಂಡು ಪರಾರಿಯಾಗಿದ್ದಾರೆ.
ಏನಿದು ಘಟನೆ? ಕಳವಾದದ್ದು ಯಾವಾಗ?
ಬನವಾಸೆ ಗ್ರಾಮದ ಸರ್ವೆ ನಂ: 09/3 ರಲ್ಲಿ ಜಿಟಿಎಲ್ ಇನ್ಫ್ರಾಸ್ಟ್ರಕ್ಚರ್ (GTL Infra) ಕಂಪನಿಯು ಮೊಬೈಲ್ ಟವರ್ ಅನ್ನು ಸ್ಥಾಪಿಸಿತ್ತು. ಜೂನ್ 25, 2026 ರಂದು ಕಂಪನಿಯ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಟವರ್ ಮತ್ತು ಉಪಕರಣಗಳು ಸುರಕ್ಷಿತವಾಗಿಯೇ ಇದ್ದವು.
ಆದರೆ, ಜುಲೈ 06 ರಂದು ಕಂಪನಿಯ ಪ್ರತಿನಿಧಿಗಳು ಮತ್ತೆ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಟವರ್ ಇರಲಿಲ್ಲ! ಕೇವಲ ಖಾಲಿ ಜಾಗವಷ್ಟೇ ಇತ್ತು. ಕಳ್ಳರು ಇಡೀ ಟವರ್ ಅನ್ನು ಬಿಚ್ಚಿ, ವಾಹನಗಳಲ್ಲಿ ತುಂಬಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಕಳ್ಳರ ಪಾಲಾದ ಕೋಟ್ಯಂತರ ಮೌಲ್ಯದ ವಸ್ತುಗಳು ಏನೇನು?
ಖದೀಮರು ಕೇವಲ ಟವರ್ ಮಾತ್ರವಲ್ಲ, ಅಲ್ಲಿನ ಬೆಲೆಬಾಳುವ ಎಲ್ಲಾ ಉಪಕರಣಗಳನ್ನೂ ದೋಚಿದ್ದಾರೆ. ಕಳವಾದ ವಸ್ತುಗಳ ವಿವರ ಇಲ್ಲಿದೆ:
- 50 ಮೀಟರ್ ಎತ್ತರದ ಬೃಹತ್ ಮೊಬೈಲ್ ಟವರ್.
- 180 KMPH ಸಾಮರ್ಥ್ಯದ ಟವರ್ ರಚನೆ (Tower Structure).
- 2.5 ಮೀ X 3ಮೀ X 2.7 ಮೀ ಅಳತೆಯ ಹೈಟೆಕ್ ಟವರ್ ಶೆಲ್ಟರ್.
- 15 KVA ಸಾಮರ್ಥ್ಯದ ಡಿಜಿ (DG) ಸೆಟ್ (ಜನರೇಟರ್).
ಪೊಲೀಸರ ಬಲೆಗೆ ಬೀಳುತ್ತಾರಾ ಕಳ್ಳರು?
ಘಟನೆ ಕುರಿತಂತೆ ಜಿಟಿಎಲ್ ಇನ್ಫ್ರಾ ಲಿಮಿಟೆಡ್ ಕಂಪನಿಯ ಕರ್ನಾಟಕ ವಲಯದ ಲೈಸನಿಂಗ್ ಎಕ್ಸಿಕ್ಯೂಟಿವ್ ಆಗಿರುವ ಉಡುಪಿ ಜಿಲ್ಲೆ ಕುಂದಾಪುರ ಮೂಲದ ಸಂದೀಪ್ ಅವರು ಜುಲೈ 22 ರಂದು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಥಳ ಮಹಜರು ನಡೆಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.
ಯಕ್ಷಪ್ರಶ್ನೆಯಾಗಿ ಉಳಿದ ಕಳ್ಳತನ!
ಬಿಹಾರದಲ್ಲಿ ನಕಲಿ ಅಧಿಕಾರಿಗಳ ಸೋಗಿನಲ್ಲಿ ಬಂದು ಟವರ್ ಕದ್ದಾಗ ಇಡೀ ದೇಶವೇ ಬೆರಗಾಗಿತ್ತು. ಇದೀಗ ಕರ್ನಾಟಕದಲ್ಲಿಯೂ ಇಂಥದ್ದೊಂದು ಸಾಹಸಕ್ಕೆ ಕಳ್ಳರು ಕೈಹಾಕಿದ್ದಾರೆ. ಇಷ್ಟು ದೊಡ್ಡ 50 ಮೀಟರ್ ಎತ್ತರದ ಟವರ್ ಅನ್ನು ಬಿಚ್ಚಿ, ಬೃಹತ್ ಜನರೇಟರ್ ಅನ್ನು ವಾಹನಕ್ಕೆ ತುಂಬಿಕೊಂಡು ಹೋಗುವಾಗ ಸ್ಥಳೀಯರ ಗಮನಕ್ಕೆ ಬಂದಿಲ್ಲವೇ? ಅಥವಾ ಕಳ್ಳರು ಯಾವುದಾದರೂ ನಕಲಿ ದಾಖಲೆ ತೋರಿಸಿ ಸ್ಥಳೀಯರನ್ನು ನಂಬಿಸಿದ್ದಾರೆಯೇ? ಎಂಬುದು ಸದ್ಯದ ದೊಡ್ಡ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಈ ‘ಮೆಗಾ ಕಳ್ಳತನ’ ಸಕಲೇಶಪುರ ಭಾಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರ ತನಿಖೆಯಿಂದಷ್ಟೇ ಅಸಲಿ ಸತ್ಯ ಹೊರಬರಬೇಕಿದೆ.








