Hassan: ಮುಸುಕಿನ ಜೋಳಕ್ಕೆ ಬಿಳಿಸುಳಿ ರೋಗ: ವಿಶೇಷ ಪರಿಹಾರಕ್ಕಾಗಿ ಸಿಎಂಗೆ ಸಂಸದ ಶ್ರೇಯಸ್ ಪಟೇಲ್ ಪತ್ರ

Hassan|ಹಾಸನ: ಜಿಲ್ಲೆಯ ಪ್ರಮುಖ ಕೃಷಿ ಬೆಳೆಯಾದ ಮುಸುಕಿನ ಜೋಳಕ್ಕೆ ‘ಬಿಳಿಸುಳಿ’ (ಕೇದಿಗೆ) ಎಂಬ ಮಾರಕ ಶಿಲೀಂಧ್ರ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಸಂಪೂರ್ಣ ಬೆಳೆ ನಷ್ಟದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸುವಂತೆ ಮತ್ತು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಒದಗಿಸುವಂತೆ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಅವರು  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಸಂಸದ ಶ್ರೇಯಸ್ ಪಟೇಲ್, ಶಾಸಕ ಕೆಎಂ ಶಿವಲಿಂಗೇಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ ಅವರು ಜೋಳ ಬೆಳೆಗಾರರ ನೆರವಿಗೆ ಬರುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು

ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ ಶ್ರೇಯಸ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಸಂಸತ್ ಸದಸ್ಯ ಶ್ರೇಯಸ್ ಪಟೇಲ್, ಶಾಸಕ ಕೆ.ಎಂ. ಶಿವಲಿಂಗೇಗೌಡ,ವಿಧಾನಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ ಅವರು ಮನವಿ ಪತ್ರ ಸಲ್ಲಿಸಿದರು

​ರೈತರ ಆರ್ಥಿಕ ಸ್ವಾವಲಂಬನೆಗೆ ಮುಸುಕಿನ ಜೋಳ ಅತ್ಯಂತ ಸಹಕಾರಿಯಾಗಿದೆ. ಜಿಲ್ಲೆಯ ಬಹುತೇಕ ರೈತರು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಕಾಳು ಮತ್ತು ಮೇವಿನ ಉದ್ದೇಶಕ್ಕಾಗಿ ಈ ಬೆಳೆಯನ್ನು ವಾಡಿಕೆಯಾಗಿ ಬೆಳೆಯುತ್ತಾರೆ. ಆದರೆ ರೋಗಬಾಧೆಯಿಂದ ರೈತರ ಬದುಕು ಈಗ ಅತಂತ್ರವಾಗಿದೆ.

​ಬೆಳೆ ನಷ್ಟದ ಆತಂಕಕಾರಿ ಅಂಕಿ-ಅಂಶಗಳು

​ಪತ್ರದಲ್ಲಿ ಉಲ್ಲೇಖಿಸಿರುವಂತೆ ಬೆಳೆ ಹಾನಿಯ ವಿವರಗಳು ಹೀಗಿವೆ:

  • ​ಹಾಸನ ಜಿಲ್ಲೆಯಲ್ಲಿ ವಾಡಿಕೆಯಾಗಿ 1.0 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬೆಳೆಯಲಾಗುತ್ತದೆ.
  • ​ಕಳೆದ 2025ನೇ ಸಾಲಿನಿಂದ ಬೆಳೆಗೆ ಶಿಲೀಂಧ್ರದಿಂದ ಉಂಟಾಗುವ ಬಿಳಿಸುಳಿ/ಕೇದಿಗೆ ರೋಗ ಕಾಣಿಸಿಕೊಂಡಿದೆ.
  • ​ಪ್ರಸಕ್ತ 2026ನೇ ಮುಂಗಾರು ಹಂಗಾಮಿನಲ್ಲಿ ಈ ರೋಗದ ತೀವ್ರತೆಯು ಕಳೆದ ಸಾಲಿಗಿಂತ ದ್ವಿಗುಣಗೊಂಡಿದೆ.
  • ​ಪ್ರಸ್ತುತ ಬಿತ್ತನೆಯಾಗಿರುವ 71,588 ಹೆಕ್ಟೇರ್ ವಿಸ್ತೀರ್ಣದಲ್ಲಿ ಬರೋಬ್ಬರಿ 45,669 ಹೆಕ್ಟೇರ್ ಪ್ರದೇಶವು ರೋಗಬಾಧೆಗೆ ತುತ್ತಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
  • ​ಮುಂದಿನ ದಿನಗಳಲ್ಲಿ ಸದರಿ ರೋಗ ಬಾಧಿತ ಪ್ರದೇಶವು ಮತ್ತಷ್ಟು ಹೆಚ್ಚಾಗಿ, ಸಂಪೂರ್ಣ ಬೆಳೆ ನಷ್ಟವಾದರೂ ಆಶ್ಚರ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

​ಹತೋಟಿಗೆ ಬಾರದ ಶಿಲೀಂಧ್ರ ರೋಗ

​ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಮಂಡ್ಯದ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ವೈಜ್ಞಾನಿಕ ಸಲಹೆಯ ಮೇರೆಗೆ ಜಿಲ್ಲೆಗೆ ಸರಬರಾಜಾಗುವ ಎಲ್ಲಾ ಕಂಪನಿಗಳ, ಎಲ್ಲಾ ವಿಧದ ಹೈಬ್ರಿಡ್ ಬಿತ್ತನೆ ಬೀಜಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಶಿಲೀಂಧ್ರ ನಾಶಕ ಸಿಂಪಡಣೆ ಮಾಡಿದರೂ ಸಹ ರೋಗವು ಹತೋಟಿಗೆ ಬಂದಿಲ್ಲ. ಇದರಿಂದಾಗಿ ಬೆಳೆಯು ಸಂಪೂರ್ಣ ನಷ್ಟದ ಹಾದಿಯಲ್ಲಿದ್ದು, ರೈತರು ಬೆಳೆ ಬೆಳೆಯಲು ಮಾಡಿದ ಖರ್ಚು ಕೂಡ ಹಿಂದಿರುಗಿ ಬಾರದಂತಹ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ.

​ಮಾರ್ಗಸೂಚಿ ಸಡಿಲಿಸಿ ‘ವಿಶೇಷ ಪರಿಹಾರ’ಕ್ಕೆ ಆಗ್ರಹ

​ಪ್ರಸ್ತುತ ಕೃಷಿ ಬೆಳೆಗೆ ತಗುಲಿರುವ ಈ ರೋಗಬಾಧೆಯು ಪ್ರಕೃತಿ ವಿಕೋಪದ ನಿಧಿಗಳಡಿ (NDRF/SDRF) ಪರಿಹಾರ ಪಡೆಯಲು ಇರುವ ಮಾರ್ಗಸೂಚಿಯಲ್ಲಿ ಅವಕಾಶ ಹೊಂದಿಲ್ಲ. ಈ ತಾಂತ್ರಿಕ ಕಾರಣದಿಂದ ರೈತರಿಗೆ ಪರಿಹಾರ ಕೈತಪ್ಪಬಾರದು. ಹೀಗಾಗಿ ರೈತರ ಹಿತದೃಷ್ಟಿಯಿಂದ ಈ ಸಮಸ್ಯೆಯನ್ನು “ವಿಶೇಷ ಪ್ರಕರಣ” ಎಂದು ಪರಿಗಣಿಸಬೇಕು ಹಾಗೂ ಜಿಲ್ಲೆಯ ರೈತರಿಗೆ ನ್ಯಾಯಯುತವಾದ ಆರ್ಥಿಕ ಪರಿಹಾರವನ್ನು ಪಾವತಿಸಲು ತಕ್ಷಣವೇ ಆದೇಶಿಸಬೇಕು ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.