17.9 C
Munich
Home News ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಎಚ್.ಡಿ. ಕುಮಾರಸ್ವಾಮಿ ಆಕ್ಷೇಪ; ‘ಪರಂಪರೆಗೆ ಧಕ್ಕೆ ತರಬೇಡಿ’

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಎಚ್.ಡಿ. ಕುಮಾರಸ್ವಾಮಿ ಆಕ್ಷೇಪ; ‘ಪರಂಪರೆಗೆ ಧಕ್ಕೆ ತರಬೇಡಿ’

ಬೆಂಗಳೂರು | ಜು. 11 (www.kannadapost.com):ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಆಯೋಜಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ತನ್ನದೇ ಆದ ವೈಶಿಷ್ಟ್ಯ ಹಾಗೂ ಪರಂಪರೆಯಿಂದ ಕಂಗೊಳಿಸುತ್ತಿರುವ ಮೈಸೂರು ದಸರಾ ಉತ್ಸವದಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ. ದಶಕಗಳಿಂದ ನಡೆದುಕೊಂಡು ಬಂದಿರುವ ದಸರಾ ಸಂಪ್ರದಾಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಬಾರದು” ಎಂದು ತಿಳಿಸಿದ್ದಾರೆ.

ಎಚ್‌ಡಿಕೆ ಅವರ ಪ್ರಕಾರ, ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಪರಂಪರೆ, ಭೌಗೋಳಿಕ ವೈಶಿಷ್ಟ್ಯ ಮತ್ತು ದೈವಿಕ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಆಚರಣೆಯಾಗಿದೆ. ಅದನ್ನು ಮೈಸೂರಿಗೆ ಸ್ಥಳಾಂತರಿಸುವುದರಿಂದ ಅದರ ಮೂಲ ಸಂಸ್ಕೃತಿ ಹಾಗೂ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರಾವಳಿ ಪ್ರದೇಶದ ಪ್ರಕೃತಿ, ನೀರು ಮತ್ತು ಹಸಿರಿನ ನಡುವೆ ನಡೆಯುವ ಕಂಬಳವೇ ಅದರ ನೈಜ ಸೊಬಗು ಎಂದು ಹೇಳಿರುವ ಅವರು, ಮೈಸೂರು ಹಾಗೂ ಕರಾವಳಿ ಭಾಗದ ಜನರ ಭಾವನೆಗಳಿಗೆ ನೋವಾಗುವ ನಿರ್ಧಾರಗಳನ್ನು ತಪ್ಪಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕಂಬಳವನ್ನು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಸೇರಿಸುವ ಕುರಿತು ಇತ್ತೀಚೆಗೆ ನಡೆದ ಚರ್ಚೆಗಳು ರಾಜ್ಯದಲ್ಲಿ ಪರ-ವಿರೋಧ ಅಭಿಪ್ರಾಯಗಳಿಗೆ ಕಾರಣವಾಗಿದ್ದು, ಇದೀಗ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಈ ಚರ್ಚೆಗೆ ಮತ್ತಷ್ಟು ವೇಗ ನೀಡಿದೆ.

error: Content is protected !!