17.9 C
Munich
Home Uncategorized Hassan: ಅರಸೀಕೆರೆಯಲ್ಲಿ ಎಟಿಎಂ ಕಳವು ಯತ್ನ ವಿಫಲಗೊಳಿಸಿದ ಪೊಲೀಸರು, ಬಲೆಗೆ ಬಿದ್ದ ಕಳ್ಳ, ಓರ್ವ ಪರಾರಿ!

Hassan: ಅರಸೀಕೆರೆಯಲ್ಲಿ ಎಟಿಎಂ ಕಳವು ಯತ್ನ ವಿಫಲಗೊಳಿಸಿದ ಪೊಲೀಸರು, ಬಲೆಗೆ ಬಿದ್ದ ಕಳ್ಳ, ಓರ್ವ ಪರಾರಿ!

Hassan|ಹಾಸನ, ಜು. 3: ಅರಸೀಕೆರೆ ನಗರದ ವಾಚನಾಲಯ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಹಣ ಕಳವು ಮಾಡಲು ಯತ್ನಿಸುತ್ತಿದ್ದ ವೇಳೆಯೇ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿದ ಪೊಲೀಸರು, ಓರ್ವನನ್ನು ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಬಂಧಿತನನ್ನು ಅವೇಜ್‌ಖಾನ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಆರೋಪಿ ಸುಹೀಲ್ ಪರಾರಿಯಾಗಿದ್ದಾನೆ. ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಆರೋಪಿಗಳು ಎಟಿಎಂ ಯಂತ್ರದ ರಿಮೋಟ್ ವ್ಯವಸ್ಥೆಯನ್ನು ಹಾನಿಗೊಳಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ ಎಟಿಎಂನಲ್ಲಿದ್ದ ಹಣ ಕಳವು ಮಾಡಲು ಯತ್ನಿಸುತ್ತಿದ್ದರು. ಇದೇ ವೇಳೆ ಎಟಿಎಂ ನಿರ್ವಹಣೆ ಮತ್ತು ಹಣ ತುಂಬುವ ಜವಾಬ್ದಾರಿಯನ್ನು ಹೊಂದಿರುವ ಎನ್.ಸಿ.ಆರ್. ಕಾರ್ಪೊರೇಷನ್ ಇಂಡಿಯಾ ಪ್ರೈ. ಲಿ.ನ ಹೈದರಾಬಾದ್ ನಿಯಂತ್ರಣ ಕೇಂದ್ರಕ್ಕೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.

ಕಂಪನಿಯ ಪ್ರತಿನಿಧಿಗಳು ತಕ್ಷಣವೇ ಅರಸೀಕೆರೆ ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಟಿಎಂ ಒಳಗೆ ಕಳವು ನಡೆಸಲು ಯತ್ನಿಸುತ್ತಿದ್ದ ಆರೋಪಿಗಳ ಮೇಲೆ ದಾಳಿ ನಡೆಸಿದರು.

ಈ ವೇಳೆ ಅವೇಜ್‌ಖಾನ್ ಪೊಲೀಸರ ಕೈಗೆ ಸಿಕ್ಕಿಬಿದ್ದರೆ, ಸುಹೀಲ್ ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾಗಿದ್ದಾನೆ.
ಘಟನೆ ಸಂಬಂಧ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ವಿಶೇಷ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!