Hassan: ಎತ್ತಿನಹೊಳೆ ಪರಿಹಾರ ವಿಚಾರದಲ್ಲಿ ‘ಕ್ರೆಡಿಟ್ ವಾರ್’ – ಸಚಿವ ರಾಮಲಿಂಗಾರೆಡ್ಡಿ ಸಮ್ಮುಖದಲ್ಲೇ ಶಾಸಕರಾದ ಶಿವಲಿಂಗೇಗೌಡ ಹಾಗೂ ಹೆಚ್.ಕೆ. ಸುರೇಶ್ ಜಟಾಪಟಿ

Hassan/ಹಾಸನ (ಬೇಲೂರು): ರೈತರಿಗೆ ಸೇರಬೇಕಾದ ಪರಿಹಾರ ಹಣ ಬಿಡುಗಡೆಯ ಶ್ರೇಯಸ್ಸಿನ (Credit) ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲೇ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಹಾಗೂ ಹೆಚ್.ಕೆ. ಸುರೇಶ್ ಅವರ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ಬೇಲೂರು ತಾಲೂಕಿನ ಗಂಗೂರು ಗ್ರಾಮದಲ್ಲಿ ನಿನ್ನೆ ಸಂಜೆ ಜರುಗಿದೆ.

ಘಟನೆಯ ಹಿನ್ನೆಲೆ:

ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆಗಾಗಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಗಂಗೂರು ಗ್ರಾಮಕ್ಕೆ ಆಗಮಿಸಿದ್ದರು. ಈ ಯೋಜನೆಗಾಗಿ ತಮ್ಮ ಜಮೀನುಗಳನ್ನು ಕಳೆದುಕೊಂಡಿರುವ ರೈತರು, ತಮಗೆ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ 28 ಕೋಟಿ ರೂ.ಗಳ ಪರಿಹಾರ ಹಣದ ಕುರಿತು ಸಚಿವರಿಗೆ ಮನವಿ ಸಲ್ಲಿಸುತ್ತಿದ್ದರು.

ಮಾತಿನ ಚಕಮಕಿ:

ರೈತರು ಸಚಿವರೊಂದಿಗೆ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು, “ನಾನೇ ಖುದ್ದಾಗಿ ಮಾತನಾಡಿ 28 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿಸಿದ್ದೇನೆ” ಎಂದು ಹೇಳಿದರು.

​ಇದು ಸ್ಥಳೀಯ ಶಾಸಕ ಹೆಚ್.ಕೆ. ಸುರೇಶ್ ಅವರ ಆಕ್ರೋಶಕ್ಕೆ ಕಾರಣವಾಯಿತು. “ಎಲ್ಲದರಲ್ಲೂ ನಂದೇ, ನಂದೇ ಎಂದು ಹೇಳಿಕೊಳ್ಳಲು ಬರುತ್ತೀರಿ. ನನ್ನ ಕ್ಷೇತ್ರದಲ್ಲಿ ಮಾತನಾಡಲು ನೀವ್ಯಾರು?” ಎಂದು ಅವರು ಗರಂ ಆಗಿ ಪ್ರಶ್ನಿಸಿದರು. ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ ಶಿವಲಿಂಗೇಗೌಡ ಅವರು, “ಹೌದು, 28 ಕೋಟಿ ರೂ. ತರಿಸಿರುವವನು ನಾನು. ಅದನ್ನು ನೀನು ಹೇಳು” ಎಂದು ಪಟ್ಟು ಹಿಡಿದರು. ಇಬ್ಬರು ನಾಯಕರ ನಡುವಿನ ಈ ವಾಕ್ಸಮರ ಕೆಲಕಾಲ ತೀವ್ರ ಬಿಗುವಿನ ವಾತಾವರಣ ನಿರ್ಮಾಣ ಮಾಡಿತ್ತು.

ಮೂಕಪ್ರೇಕ್ಷಕರಾದ ಸಚಿವರು ಹಾಗೂ ಅಧಿಕಾರಿಗಳು:

ಸಾರ್ವಜನಿಕವಾಗಿ ಹಾಗೂ ರೈತರ ಎದುರಲ್ಲೇ ಇಬ್ಬರು ಶಾಸಕರು ಏರುಧ್ವನಿಯಲ್ಲಿ ಕಿತ್ತಾಡುತ್ತಿದ್ದರೂ, ಸ್ಥಳದಲ್ಲಿದ್ದ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಅಸಹಾಯಕರಾಗಿ ಮೂಕಪ್ರೇಕ್ಷಕರಂತೆ ನಿಂತಿದ್ದರು.

​ಅಂತಿಮವಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸ್ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ಇಬ್ಬರೂ ಶಾಸಕರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.