Hassan:ಬಿಡದಿ ಟೌನ್‌ಶಿಪ್ ಜಟಾಪಟಿ; “ಇದು ಸರ್ವಾಧಿಕಾರವಲ್ಲ, ಇಂದಿರಾಗಾಂಧಿ ಸತ್ತು ಬಹಳ ವರ್ಷವಾಯ್ತು!” ಡಿಕೆಶಿಗೆ ಪ್ರತಾಪ್ ಸಿಂಹ ಟಾಂಗ್

ನಾಗಮಂಗಲ ಏರ್‌ಪೋರ್ಟ್ ಯೋಜನೆಗೆ ಸ್ವಾಗತ; ಆದರೆ ರೈತರ ಜಮೀನು ಬಲವಂತವಾಗಿ ಕಿತ್ತುಕೊಳ್ಳುವುದು ತಪ್ಪು - ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ. ಕಾಫಿ ತೋಟಗಳಲ್ಲಿ ಅಕ್ರಮ ಬಾಂಗ್ಲಾದೇಶಿಗರ ಪತ್ತೆಗೆ ಆಗ್ರಹ.

Hassan|ಹಾಸನ: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬಿಡದಿ ಟೌನ್‌ಶಿಪ್ ಜಟಾಪಟಿ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆಯ ಆಲೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಇಚ್ಛೆಗೆ ವಿರುದ್ಧವಾಗಿ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿರುವುದನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ.

​ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಗಮಂಗಲದಲ್ಲಿ ವಿಮಾನ ನಿಲ್ದಾಣ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡಿರುವುದನ್ನು ಸ್ವಾಗತಿಸಿದ ಪ್ರತಾಪ್ ಸಿಂಹ,

“ಏರ್‌ಪೋರ್ಟ್ ಮಾಡಿದ‌ ಮೇಲೆ ಸಹಜವಾಗಿ ಆ ಭಾಗ ಅಭಿವೃದ್ಧಿ ಆಗುತ್ತದೆ, ಇದು ಖಂಡಿತ ಸ್ವಾಗತಾರ್ಹ ವಿಚಾರ. ಆದರೆ, ಕೈಗಾರಿಕೆಗಳನ್ನು ತೆರೆಯಬೇಕಾದರೆ ರಾಮನಗರ ಭಾಗದಲ್ಲಿ ಎಲ್ಲಿ ಸರ್ಕಾರಿ ಭೂಮಿ ಮತ್ತು ಬಂಜರು ಭೂಮಿ ಇದೆಯೋ ಅಲ್ಲಿ ಮಾಡಿ. ಅದನ್ನು ಬಿಟ್ಟು ರಿಯಲ್ ಎಸ್ಟೇಟ್‌ನವರು ಮಾಡುವ ಕೆಲಸವನ್ನು ಸರ್ಕಾರದಲ್ಲಿ ಕುಳಿತು ನೀವು ಮಾಡಬೇಕಾದ ಅಗತ್ಯವಿಲ್ಲ” ಎಂದು ಟಾಂಗ್ ನೀಡಿದರು

​”ನಿಮಗೆ ಅಧಿಕಾರ ಕೊಟ್ಟು ಕೂರಿಸಿರುವವರೇ ಆ ರೈತರು. ಅವರ ಇಚ್ಛೆಯಿಲ್ಲದೆ ಜಮೀನನ್ನು ಕಿತ್ತುಕೊಳ್ಳುವುದು ಸರಿಯಲ್ಲ. ರೈತರು ಸ್ವಇಚ್ಛೆಯಿಂದ ಕೊಟ್ಟರೆ ಮಾತ್ರ ಪಡೆದುಕೊಳ್ಳಿ. ಅದನ್ನು ಬಿಟ್ಟು ‘ನಾನು ಮಾಡೇ ತೀರ್ತಿನಿ’ ಎಂದು ಹೇಳಲು ಇದೇನು ಸರ್ವಾಧಿಕಾರ ಅಲ್ಲ ಸರ್. ಇಂದಿರಾಗಾಂಧಿ ಸತ್ತು ಹೋಗಿ ಬಹಳ ವರ್ಷ ಆಯ್ತು, ಆ ಸರ್ವಾಧಿಕಾರಿ ಧೋರಣೆಯನ್ನು ನೀವು ಇಲ್ಲಿ ತೋರಬೇಡಿ” ಎಂದು ಆಕ್ರೋಶ ಹೊರಹಾಕಿದರು.

​ರೈತರ ಹಿತರಕ್ಷಣೆ ಮತ್ತು ಮಾತುಕತೆಯ ಅಗತ್ಯತೆಯನ್ನು ಒತ್ತಿಹೇಳಿದ ಅವರು, “ಕುಮಾರಣ್ಣ ಅವರು ಭೈರಹೊಂಗಲಕ್ಕೆ ಬನ್ನಿ ಅಲ್ಲೇ ತೀರ್ಮಾನ ಆಗಲಿ ಎಂದು ಮುಕ್ತವಾಗಿ ಕರೆ ನೀಡಿದ್ದಾರೆ. ಹಾಗಿರುವಾಗ ವಿಧಾನಸೌಧದಲ್ಲೇ ಕುಳಿತು ಏಕೆ ಚರ್ಚೆ ಮಾಡುವ ಅಗತ್ಯತೆ ಏನಿದೆ? ಅದೇ ರೈತರು ನಿಮ್ಮನ್ನು 1989 ರಿಂದ ಸತತವಾಗಿ ಗೆಲ್ಲಿಸುತ್ತಾ ಬಂದಿದ್ದಾರೆ. ಆ ರೈತನ ಬಳಿ ನೇರವಾಗಿ ಹೋಗಿ ಏನು ಸಮಸ್ಯೆ ಇದೆ ಎಂದು ಏಕೆ ಕೇಳುತ್ತಿಲ್ಲ? ಇದರಲ್ಲಿ ಪ್ರತಿಷ್ಠೆಯ ಪ್ರಶ್ನೆ ಏಕೆ ತರುತ್ತಿದ್ದೀರಿ? ಕುಮಾರಣ್ಣ ಮತ್ತು ನೀವು ಇಬ್ಬರೂ ಒಟ್ಟಿಗೆ ಕುಳಿತುಕೊಂಡು ರೈತರನ್ನು ಕೇಳಿ. ರೈತರಿಗೆ ಇಚ್ಛೆ ಇದ್ದರೆ ಕೊಡುತ್ತಾರೆ, ಇಲ್ಲಾ ಅಂದರೆ ಕೈಬಿಡಿ” ಎಂದು ಸಲಹೆ ನೀಡಿದರು.

​ತಾವು ಅಭಿವೃದ್ಧಿಯ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ ಸಿಂಹ, “ನಾನು ಅಭಿವೃದ್ಧಿಯ ವಿರೋಧಿ ಅಲ್ಲಾ. ತೀವ್ರ ವಿರೋಧದ ನಡುವೆಯೂ ನಾನು ಬೆಂಗಳೂರು-ಮಂಗಳೂರು ಹೆದ್ದಾರಿ ಮಾಡಿಕೊಟ್ಟಿದ್ದೇನೆ. ಆದರೆ ರೈತರ ಇಚ್ಛೆಗೆ ವಿರುದ್ಧವಾಗಿ ಜಮೀನನ್ನು ಕಿತ್ತುಕೊಳ್ಳುವುದು ತಪ್ಪು. ಕೈಗಾರಿಕೆ ಬೆಳೆಸಲು ಮಾತ್ರ ಯೋಚನೆ ಮಾಡಬೇಕು ಮತ್ತು ಭೂಮಿ ನೀಡುವ ರೈತರಿಗೆ ಅದರಲ್ಲಿ ಸೂಕ್ತ ಪಾಲುದಾರಿಕೆಯನ್ನು ನೀಡಬೇಕು” ಎಂದು ಪ್ರತಿಪಾದಿಸಿದರು.

ಕಾಫಿ ತೋಟಗಳಲ್ಲಿ ಹೆಚ್ಚಿದ ಅಕ್ರಮ ವಲಸೆಗಾರರ ಆತಂಕ:

ಇದೇ ವೇಳೆ ಹಾಸನ ಮತ್ತು ಕೊಡಗು ಭಾಗದ ಪ್ರಮುಖ ಸಮಸ್ಯೆಯಾದ ಕಾಫಿ ತೋಟದ ಕಾರ್ಮಿಕರ ಕೊರತೆಯ ಬಗ್ಗೆಯೂ ಪ್ರತಾಪ್ ಸಿಂಹ ಕಳವಳ ವ್ಯಕ್ತಪಡಿಸಿದರು. “ಪ್ರಸ್ತುತ ಕಾಫಿ ತೋಟಗಳಲ್ಲಿ ಕಾರ್ಮಿಕರ ತೀವ್ರ ಕೊರತೆ ಇದೆ. ಹಾಗಾಗಿ ಅಸ್ಸಾಂನಿಂದ ಬಂದವರು ಎಂದು ಹೇಳಿಕೊಂಡು ಬಹಳ ಜನ ಇಲ್ಲಿಗೆ ಕೆಲಸಕ್ಕೆ ಬರುತ್ತಿದ್ದಾರೆ. ಆದರೆ, ಈ ರೀತಿ ಬರುತ್ತಿರುವವರಲ್ಲಿ ಅಕ್ರಮ ಬಾಂಗ್ಲಾದೇಶದ ವಲಸಿಗರು ಇದ್ದಾರಾ ಎಂಬುದನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ತಕ್ಷಣವೇ ತನಿಖೆ ನಡೆಸಿ ಖಚಿತಪಡಿಸಿಕೊಳ್ಳಬೇಕು” ಎಂದು ಆಗ್ರಹಿಸುವ ಮೂಲಕ ಹೊಸದೊಂದು ಗಂಭೀರ ಚರ್ಚೆಗೆ ನಾಂದಿ ಹಾಡಿದ್ದಾರೆ.