ಹಾಸನ/Hassan: ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ‘ಸಿಮೆಂಟ್’ ಮಂಜು ಅವರ ವಿರುದ್ಧ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅವರು ಭ್ರಷ್ಟಾಚಾರ, ಅಡ್ಡಮತದಾನ, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸಕಲೇಶಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಲಿ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಶಾಸಕರ ಪಾಪದ ಕೊಡ ತುಂಬಿದೆ, ಇನ್ನು ಮುಂದೆ ನಾವು ಸುಮ್ಮನೆ ಕೂರುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಮಾಡಿದ ಪ್ರಮುಖ ಆರೋಪಗಳು:
- ಅಡ್ಡಮತದಾನ ಹಾಗೂ ಶಾಸಕ ಸ್ಥಾನ ಮಾರಾಟ: ೫ ರಿಂದ ೧೦ ಕೋಟಿ ರೂಪಾಯಿ ಹಣ ಪಡೆದುಕೊಂಡು ಇವರೇ ಅಡ್ಡ ಮತದಾನ ಮಾಡಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣ ಪಡೆದು ತಮ್ಮ ಶಾಸಕ ಸ್ಥಾನವನ್ನೇ ಮಾರಾಟ ಮಾಡಿಕೊಂಡಿದ್ದಾರೆ. ಇವರಿಗೆ ಮಾನ-ಮರ್ಯಾದೆ ಇದೆಯಾ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.
- 10% ಕಮಿಷನ್ ದಂಧೆ: ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಶಾಸಕರು ೧೦ ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ. ಜೆಜೆಎಂ (ಜಲ ಜೀವನ್ ಮಿಷನ್) ಯೋಜನೆಯಲ್ಲಿ ಭಾರೀ ಲೂಟಿ ಹೊಡೆದಿದ್ದು, ಪರ್ಸೆಂಟೇಜ್ ಗಲಾಟೆಯಿಂದಾಗಿಯೇ ಕ್ಷೇತ್ರದಲ್ಲಿ ಬರೋಬ್ಬರಿ ೧೮ ಕಾಮಗಾರಿಗಳು ಸ್ಥಗಿತಗೊಂಡಿವೆ.
- ಕಾಡೆಮ್ಮೆಗಳ ಮಾರಣಹೋಮ: ಕಾಡೆಮ್ಮೆಗಳನ್ನು ಕಡಿದು, ಪ್ರತಿ ಕೆ.ಜಿಗೆ ೨೦೦೦ ರೂ. ನಂತೆ ಮಾಂಸ ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ಆದರೂ ಶಾಸಕರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ.
- ಅಕ್ರಮ ಮರಳು ಗಣಿಗಾರಿಕೆ: ಕಳೆದ ನಾಲ್ಕು ವರ್ಷಗಳಿಂದ ಹೇಮಾವತಿ ನದಿಯಲ್ಲಿ ಮರಳನ್ನು ಲೂಟಿ ಮಾಡಲಾಗುತ್ತಿದೆ. ಲೂಟಿ ಮಾಡಲು ಶಾಸಕರು ತಮ್ಮ ಸಹೋದರರನ್ನೇ ನೇಮಿಸಿದ್ದಾರೆ. ಹಿಂದಿನ ಶಾಸಕರು ಬೇಡ ಎಂದು ಜನ ಬದಲಾವಣೆ ಮಾಡಿದರು, ಆದರೆ ಇವರೂ ಅದೇ ಲೂಟಿಯಲ್ಲಿ ತೊಡಗಿದ್ದಾರೆ.
- ಡ್ರಗ್ಸ್ ಹಾವಳಿ: ಕ್ಷೇತ್ರದಲ್ಲಿ ಡ್ರಗ್ಸ್ ಹಾವಳಿ ಮಿತಿಮೀರಿದೆ. ಆದರೆ, ಇದನ್ನು ತಡೆಯುವ ತಾಕತ್ತು ಶಾಸಕರಿಗಿಲ್ಲ. ಅಧಿಕಾರಿಗಳು ಸಹ ಶಾಸಕರೆಂದರೆ ಭೂತನಾ ಎನ್ನುವಂತೆ ಭಯಪಡುತ್ತಿದ್ದಾರೆ.
ದಲಿತರ ಶೋಷಣೆ ಹಾಗೂ ಹೋರಾಟದ ಎಚ್ಚರಿಕೆ:
“ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಎಂದು ಟೋಪಿ ಹಾಕಿಕೊಂಡು ಪೆರೇಡ್ ಮಾಡ್ತಾರೆ. ಆದರೆ, ಅಲ್ಲಿ ಪೆರೇಡ್ ಮಾಡಿ ಇಲ್ಲಿ ದಲಿತರ ಶೋಷಣೆ ಮಾಡುತ್ತಿದ್ದಾರೆ. ಇಲ್ಲಿ ಮೀಸಲಾತಿ ಎನ್ನುವುದು ಶಾಪವಾಗಿ ಪರಿಣಮಿಸಿದೆ” ಎಂದು ಹೆಚ್.ಎಂ. ವಿಶ್ವನಾಥ್ ಕಿಡಿಕಾರಿದ್ದಾರೆ.
”ಇಷ್ಟು ದಿನ ಪಾಪದ ಕೊಡ ತುಂಬಲಿ ಎಂದು ಮೌನವಾಗಿದ್ದೆವು. ಅನ್ಯಾಯವನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಶಾಸಕರ ದಂಧೆಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳ ಕಚೇರಿಯ ಎದುರು ಧರಣಿ ಕೂರುತ್ತೇನೆ ಹಾಗೂ ಲೋಕಾಯುಕ್ತಕ್ಕೂ ದೂರು ನೀಡುತ್ತೇನೆ” ಎಂದು ಅವರು ಗುಡುಗಿದರು.











