- (Hollywood) ಹಾಲಿವುಡ್‌ನಲ್ಲಿ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾದ ಒಂದು ಚಿತ್ರ ಇಂದು ವಿಶ್ವದಾದ್ಯಂತ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ಆ ಚಿತ್ರವೇ ‘Obsession’ (ಅಬ್ಸೆಷನ್). ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ಸಾಧಿಸಿರುವ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ, ವಿಮರ್ಶಕರ ವಲಯದಲ್ಲಿ ಹಾಗೂ ಸಿನಿ ಅಭಿಮಾನಿಗಳ ನಡುವೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಚಿತ್ರದ ಕಥಾವಸ್ತು ಏನು?
ಅಮೆರಿಕದ Hollywood ಯುವ ನಿರ್ದೇಶಕ Curry Barker ನಿರ್ದೇಶಿಸಿರುವ ಈ ಮಾನಸಿಕ-ಅಲೌಕಿಕ ಹಾರರ್ ಚಿತ್ರ Obsession, ‘Bear’ ಎಂಬ ಯುವಕನ ಕಥೆಯನ್ನು ಹೇಳುತ್ತದೆ. ತನ್ನ ಸ್ನೇಹಿತೆ ‘Nikki’ ತನ್ನನ್ನು ಪ್ರೀತಿಸಬೇಕು ಎಂಬ ಆಸೆಯಿಂದ ಒಂದು ಅತೀಂದ್ರಿಯ ವಸ್ತುವಿನ ಸಹಾಯ ಪಡೆಯುವ ಆತ, ನಂತರ ಅದರಿಂದ ಉಂಟಾಗುವ ಭಯಾನಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪ್ರೇಮ, ಮೋಹ, ಸ್ವಾಮಿತ್ವ (possesive) ಮನೋಭಾವ ಹಾಗೂ ಮಾನಸಿಕ ಅಸ್ವಸ್ಥತೆಯಂತಹ ಅಂಶಗಳನ್ನು ಚಿತ್ರ ಗಾಢವಾಗಿ ಅನ್ವೇಷಿಸುತ್ತದೆ.
ಯಾಕೆ ಅಲೆ ಎಬ್ಬಿಸಿದೆ?
‘ಅಬ್ಸೆಷನ್’ ಸಾಮಾನ್ಯ ಹಾರರ್ ಚಿತ್ರವಲ್ಲ. ಇದು ಇಂದಿನ ಯುವಜನರ ಸಂಬಂಧಗಳು, ಏಕಪಕ್ಷೀಯ ಪ್ರೀತಿ, ನಿರಾಕರಣೆಯ ಭಯ ಹಾಗೂ ಕಲ್ಪನೆ ಮತ್ತು ವಾಸ್ತವದ ನಡುವಿನ ಸಂಘರ್ಷವನ್ನು ಹಾರರ್ ಶೈಲಿಯಲ್ಲಿ ಪ್ರಸ್ತುತಪಡಿಸಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಹಲವರು ಇದನ್ನು “ಇಂದಿನ ತಲೆಮಾರಿನ ಮನಸ್ಥಿತಿಯ ಮೇಲೆ ಮಾಡಿದ ಗಾಢ ಸಾಮಾಜಿಕ ವಿಮರ್ಶೆ” ಎಂದು ಕರೆದಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಾಧನೆ
ಕೇವಲ ಸುಮಾರು 7.5 ಲಕ್ಷ ಡಾಲರ್ (ಅಂದಾಜು ₹6–7 ಕೋಟಿ) ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಜಾಗತಿಕವಾಗಿ 170 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಗಳಿಕೆ ಮಾಡಿ ಹಾಲಿವುಡ್‌ನ ಅತ್ಯಂತ ಲಾಭದಾಯಕ ಇಂಡಿ ಹಾರರ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ನಟಿ ಇಂಡೆ ನವರ್ರೆಟ್‌ಗೆ ಭಾರೀ ಮೆಚ್ಚುಗೆ
ಚಿತ್ರದಲ್ಲಿ ‘Nikki’ ಪಾತ್ರ ನಿರ್ವಹಿಸಿರುವ Inde Navarrette ಅವರ ಅಭಿನಯಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ವಿಮರ್ಶಕರು ಅವರ ಅಭಿನಯವನ್ನು ಚಿತ್ರದ ಪ್ರಮುಖ ಬಲವೆಂದು ಕೊಂಡಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಪಾತ್ರದ ಕುರಿತು ಸಾವಿರಾರು ಚರ್ಚೆಗಳು ನಡೆಯುತ್ತಿವೆ.
ಭಾರತದಲ್ಲೂ ವಿವಾದ
ಭಾರತದಲ್ಲಿ ಬಿಡುಗಡೆಯಾದಾಗ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದು ಚರ್ಚೆಗೆ ಕಾರಣವಾಯಿತು. ವಯಸ್ಕರ (‘A’) ಪ್ರಮಾಣಪತ್ರ ಪಡೆದಿದ್ದರೂ ಕೆಲವು ಹಿಂಸಾತ್ಮಕ ಮತ್ತು ಲೈಂಗಿಕ ದೃಶ್ಯಗಳನ್ನು ತೆಗೆದುಹಾಕಿರುವುದನ್ನು ಅನೇಕ ಪ್ರೇಕ್ಷಕರು ಪ್ರಶ್ನಿಸಿದ್ದಾರೆ.
ಇದರ ಜೊತೆಗೆ, ‘A’ ಪ್ರಮಾಣಪತ್ರ ಹೊಂದಿದ್ದ ಚಿತ್ರ ಪ್ರದರ್ಶನಕ್ಕೆ ಅಪ್ರಾಪ್ತ ವಯಸ್ಕರು ಪ್ರವೇಶ ಪಡೆದಿರುವ ಬಗ್ಗೆ ಬಾಲಿವುಡ್ ನಿರ್ದೇಶಕ Sanjay Gupta ಆತಂಕ ವ್ಯಕ್ತಪಡಿಸಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಹೊಸ ತಲೆಮಾರಿನ ಹಾರರ್ ಸಿನೆಮಾದ ಸಂಕೇತ
ಅಮೆರಿಕದ ಪ್ರತಿಷ್ಠಿತ ಮಾಧ್ಯಮಗಳು ‘Obsession’ ಚಿತ್ರವನ್ನು ಹೊಸ ತಲೆಮಾರಿನ (“Zoomer Horror”) ಹಾರರ್ ಸಿನೆಮಾದ ಪ್ರಮುಖ ಉದಾಹರಣೆಯಾಗಿ ವಿಶ್ಲೇಷಿಸಿವೆ. ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ಹಿನ್ನೆಲೆಯಿಂದ ಬಂದ ಯುವ ನಿರ್ದೇಶಕರು ಹಾಲಿವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸುತ್ತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
‘ಅಬ್ಸೆಷನ್’ ಕೇವಲ ಭಯ ಹುಟ್ಟಿಸುವ ಚಿತ್ರವಲ್ಲ; ಅದು ಪ್ರೀತಿ, ಮೋಹ, ಸ್ವಾಮಿತ್ವ ಮತ್ತು ಮಾನವ ಮನಸ್ಸಿನ ಕತ್ತಲೆ ಮುಖಗಳನ್ನು ಅನಾವರಣಗೊಳಿಸುವ ಮಾನಸಿಕ ಥ್ರಿಲ್ಲರ್. ಕಡಿಮೆ ಬಜೆಟ್‌ನಲ್ಲೇ ವಿಶ್ವದಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿರುವ ಈ ಚಿತ್ರ 2026ರ ಅತ್ಯಂತ ಚರ್ಚಿತ ಹಾಲಿವುಡ್ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
– kannadapost.com ವಿಶೇಷ ವರದಿ










