Hassan|ಹಾಸನ, ಮೇ 30: ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ, ನಿರ್ಮಾಪಕಿ ಪುಷ್ಪ ಅವರು ಶನಿವಾರ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶುಭನ್ವಿತಾ ಅವರನ್ನು ಭೇಟಿ ಮಾಡಿ, ವಿದ್ಯಾನಗರದಲ್ಲಿರುವ ತಮ್ಮ ಆಸ್ತಿಗೆ ಸಂಬಂಧಿಸಿದ ಶೆಡ್ ಹಾಗೂ ಕಾಂಪೌಂಡ್ ಧ್ವಂಸ ಪ್ರಕರಣದ ಬಗ್ಗೆ ಚರ್ಚಿಸಿದರು.
ಬೆಳಿಗ್ಗೆಯೇ ಎಸ್ಪಿ ಕಚೇರಿಗೆ ಆಗಮಿಸಿದ್ದ ಪುಷ್ಪ ಅವರು ಸುಮಾರು ಒಂದು ಗಂಟೆ ಕಾಲ ಕಚೇರಿಯಲ್ಲಿ ಕಾದು ನಂತರ ಹೊರಟಿದ್ದರು. ಬಳಿಕ ಸಂಜೆ ವೇಳೆಯಲ್ಲಿ ಎಸ್ಪಿ ಶುಭನ್ವಿತಾ ಅವರನ್ನು ಭೇಟಿಯಾಗಿ ಪ್ರಕರಣದ ಕುರಿತು ಮತ್ತೊಮ್ಮೆ ಮನವಿ ಸಲ್ಲಿಸಿದರು.
ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪುಷ್ಪ, “ದೊಡ್ಡ ಗಲಾಟೆಯಾದರೂ ಈವರೆಗೆ ಎಫ್‌ಐಆರ್ ದಾಖಲಾಗಿಲ್ಲ. ಈ ಬಗ್ಗೆ ನ್ಯಾಯಾಲಯವೂ ಪ್ರಶ್ನಿಸಿದೆ. ಇದೀಗ ಎಸ್ಪಿ ಮೇಡಂ ಎಫ್‌ಐಆರ್ ದಾಖಲಿಸಲು ಸೂಚನೆ ನೀಡಿದ್ದಾರೆ. ಎಫ್‌ಐಆರ್ ಆಗದಿದ್ದರೆ ಮತ್ತೆ ತಿಳಿಸಲು ಹೇಳಿದ್ದಾರೆ” ಎಂದು ಹೇಳಿದರು.
“ನಮ್ಮ ಕಾಂಪೌಂಡ್ ಹಾಗೂ ಶೆಡ್ ಅನ್ನು ಯಾವುದೇ ನ್ಯಾಯಾಲಯದ ಆದೇಶವಿಲ್ಲದೆ ಧ್ವಂಸಗೊಳಿಸಲಾಗಿದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೂರನೇ ಬಾರಿಗೆ ಎಸ್ಪಿ ಕಚೇರಿಗೆ ಬಂದಿದ್ದೇನೆ” ಎಂದು ಅವರು ತಿಳಿಸಿದರು.
“ಬಡಾವಣೆ ಪೊಲೀಸ್ ಠಾಣೆಯಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಆಗಿದ್ದರೆ ಇಷ್ಟು ದೂರ ಬರಬೇಕಾಗಿರಲಿಲ್ಲ. ಯಾವುದೇ ಕ್ರಮ ಕೈಗೊಳ್ಳದ ಕಾರಣ ಬೆಂಗಳೂರಿಗೆ ತೆರಳಿ ಪೊಲೀಸ್ ಮಹಾನಿರ್ದೇಶಕರನ್ನು (ಡಿಜಿ) ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ನಮಗೇ ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನಾಗಬಹುದು ಎಂಬ ಪ್ರಶ್ನೆ ಕಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಘಟನೆಯಿಂದ ಸುಮಾರು ₹30 ರಿಂದ ₹35 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಹೇಳಿದ ಅವರು, “ಡಿಜಿಯವರಿಗೂ ಈ ವಿಷಯ ತಿಳಿಸಿದ್ದೇನೆ. ಈಗ ಎಫ್‌ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ. ನ್ಯಾಯ ಸಿಗುವ ವಿಶ್ವಾಸ ಇದೆ” ಎಂದು ಹೇಳಿದರು.
ಈ ಪ್ರಕರಣ ಹಾಸನದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.










