
2019ರ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾದ ಹಂಜಾ ಬರ್ಮನ್ ಪಾಕಿಸ್ತಾನದ ಮುಜಫರಾಬಾದ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳ ಗುಂಡಿಗೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.
pulwama,ಪುಲ್ವಾಮಾ,ಮೇ,21,2026(www.kannadapost.com): 2019ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಸಿಆರ್‌ಪಿಎಫ್ ವಾಹನದ ಮೇಲಿನ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾದ ಡಾಕ್ಟರ್ ಅಲಿಯಾಸ್ ಹಂಜಾ ಬರ್ಮನ್ ಪಾಕಿಸ್ತಾನದ ಮುಜಫರಾಬಾದ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳ ಗುಂಡಿಗೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಮುಜಫರಾಬಾದ್‌ನಲ್ಲಿ ಹಂಜಾ ಬರ್ಮನ್ ಸಂಚರಿಸುತ್ತಿದ್ದ ವೇಳೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಯಾರು ಈ ಹಂಜಾ ಬರ್ಮನ್?
ಹಂಜಾ ಬರ್ಮನ್ ಪುಲ್ವಾಮಾದ ಖರ್ಬತ್ಪೋರಾ ಪ್ರದೇಶದವನಾಗಿದ್ದ. 2017ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪಾಕಿಸ್ತಾನಕ್ಕೆ ಹೋಗುವುದಾಗಿ ಮನೆಯವರಿಗೆ ತಿಳಿಸಿ, ಬಳಿಕ ಅಲ್-ಬದರ್ ಭಯೋತ್ಪಾದಕ ಸಂಘಟನೆಯನ್ನು ಸೇರಿಕೊಂಡಿದ್ದ ಎನ್ನಲಾಗಿದೆ.
2019ರಲ್ಲಿ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗಳ ಮೇಲೆ ನಡೆದ ಬಾಂಬ್ ದಾಳಿಯ ಹಿಂದೆ ಹಂಜಾ ಬರ್ಮನ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಮಾಹಿತಿ ಕಲೆಹಾಕಿದ್ದವು.
ಈ ವರದಿಗಳ ಆಧಾರದ ಮೇಲೆ ಕೇಂದ್ರ ಗೃಹ ಸಚಿವಾಲಯವು 2022ರಲ್ಲಿ ಹಂಜಾ ಬರ್ಮನ್‌ನನ್ನು ಅಧಿಕೃತವಾಗಿ ಭಯೋತ್ಪಾದಕ ಎಂದು ಘೋಷಿಸಿತ್ತು.
ಪುಲ್ವಾಮಾ ದಾಳಿ: 40 ಯೋಧರು ಹುತಾತ್ಮ
2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾ ಬಳಿ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು.
ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಸಿಆರ್‌ಪಿಎಫ್ ವಾಹನಗಳ ಸರಣಿಯ ಮೇಲೆ ಸ್ಫೋಟಕಗಳಿಂದ ತುಂಬಿದ ಕಾರನ್ನು ಡಿಕ್ಕಿ ಹೊಡೆಸಲಾಗಿತ್ತು. ಈ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಭಾರತದ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.
ಈ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆ ಹೊತ್ತಿಕೊಂಡಿತ್ತು.
ಬಾಲಾಕೋಟ್ ಏರ್‌ಸ್ಟ್ರೈಕ್ ಮೂಲಕ ಭಾರತದ ಪ್ರತಿದಾಳಿ
ಪುಲ್ವಾಮಾ ದಾಳಿಯ ನಂತರ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಭಾರತ ಸರ್ಕಾರವು ದಾಳಿಗೆ ಪ್ರತಿಯಾಗಿ 2019ರ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು.
ಈ ಘಟನೆಯಿಂದ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿತ್ತು.









