Tamilnadu ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿರುವ ಸಿಪಿಎಂ, ಎಐಎಡಿಎಂಕೆ ಬಣವನ್ನು ಸಂಪುಟಕ್ಕೆ ಸೇರಿಸಿದರೆ ಬೆಂಬಲ ಮರುಪರಿಶೀಲನೆ ಮಾಡುವುದಾಗಿ ಎಚ್ಚರಿಸಿದೆ.
ತಮಿಳುನಾಡು ರಾಜಕೀಯ
ಎಐಎಡಿಎಂಕೆ ಶಾಸಕರ ಒಂದು ಬಣ

ಬೆಂಬಲ ನೀಡಿರುವ ಬಗ್ಗೆ ಮರುಚಿಂತನೆ
ತಿರುತ್ತರೈಪುಂಡಿಯಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದರು. ‘ತಮಿಳುನಾಡಿನಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ರಚನೆಯಾಗಬೇಕು ಎಂಬ ಉದ್ದೇಶದಿಂದ ಎಡಪಕ್ಷಗಳು ಮತ್ತು ವಿಸಿಕೆ ಪಕ್ಷಗಳು ಟಿವಿಕೆಗೆ ಹೊರಗಿನಿಂದ ಬೆಂಬಲ ನೀಡಿವೆ. ಅದರಂತೆ ಟಿವಿಕೆ ಸರ್ಕಾರ ರಚನೆಯಾಗಿದೆ. ಇಂತಹ ಸಂದರ್ಭದಲ್ಲಿ ಎಐಎಡಿಎಂಕೆ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡರೆ, ಅದು ಜನರ ತೀರ್ಪಿಗೆ ವಿರುದ್ಧವಾಗುತ್ತದೆ. ಹಾಗೇನಾದರೂ ನಡೆದರೆ, ಟಿವಿಕೆ ಸರ್ಕಾರಕ್ಕೆ ನೀಡಿದ ಬೆಂಬಲದ ಬಗ್ಗೆ ಮರುಚಿಂತನೆ ನಡೆಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.
ವಿಜಯ್ ಆ ಹಂತಕ್ಕೆ ಹೋಗಲ್ಲ ಎಂಬುವುದು ನಮ್ಮ ನಂಬಿಕೆ!
‘ಜನರು ಎಐಎಡಿಎಂಕೆ ಮತ್ತು ಡಿಎಂಕೆ ವಿರುದ್ಧ ಮತ ಹಾಕಿದ್ದಾರೆ. ಹೀಗಿರುವಾಗ ಎಐಎಡಿಎಂಕೆಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಜನರ ತೀರ್ಪಿಗೆ ವಿರುದ್ಧ. ಉತ್ತಮ ಆಡಳಿತ ನೀಡುತ್ತೇನೆ ಎಂಬ ಮಾತಿಗೆ ಇದು ವಿರುದ್ಧವಾಗಿ ಬಿಡುತ್ತದೆ. ಮತ್ತೊಂದು ಚುನಾವಣೆಯನ್ನು ಎದುರಿಸಬಾರದು ಮತ್ತು ಹಿಂಬಾಗಿಲಿನಿಂದ ಬಿಜೆಪಿ ರಾಜ್ಯಪಾಲರ ಆಡಳಿತವನ್ನು ತರಬಾರದು ಎಂಬ ಕಾರಣಕ್ಕಾಗಿಯೇ ನಾವು ಟಿವಿಕೆಗೆ ಬೆಂಬಲ ನೀಡಿದ್ದೇವೆ. ಅವರು ಅಂತಹ ಹಂತಕ್ಕೆ ಹೋಗುವುದಿಲ್ಲ ಎಂದು ನಾನು ನಂಬುತ್ತೇನೆ’ ಎಂದು ಅವರು ಹೇಳಿದ್ದಾರೆ.











