Hassan|ಹಾಸನ: ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಕಳ್ಳತನ ಮಾಡಲು ಯತ್ನಿಸಿದ ದುಷ್ಕರ್ಮಿಗಳು, ಬೈಕ್ ಸ್ಟಾರ್ಟ್ ಆಗದ ಕಾರಣ ಸಿಟ್ಟಿನಲ್ಲಿ ಒಂದು ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಬೇಲೂರು ಪಟ್ಟಣದ ಹೊಳೆಬೀದಿಯಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ಸುಟ್ಟು ಕರಕಲಾಗಿರುವ ಬೈಕ್ ಹಾಗೂ ಬಿಟ್ಟುಹೋದ ಮತ್ತೊಂದು ಬೈಕ್ ಸ್ಥಳೀಯ ನಿವಾಸಿ ಚಂದ್ರಶೇಖರ್ ಎಂಬುವವರಿಗೆ ಸೇರಿದ್ದಾಗಿದೆ.
ಘಟನೆಯ ವಿವರ:
ಚಂದ್ರಶೇಖರ್ ಅವರು ತಮ್ಮ ಮನೆಯ ಮುಂದೆ ಎರಡು ಬೈಕ್‌ಗಳನ್ನು ನಿಲ್ಲಿಸಿದ್ದರು. ತಡರಾತ್ರಿ ಈ ಬೈಕ್‌ಗಳನ್ನು ಕಳ್ಳತನ ಮಾಡುವ ಉದ್ದೇಶದಿಂದ ಬಂದಿದ್ದ ಚೋರರು, ವಾಹನಗಳನ್ನು ಕದಿಯಲು ಸಂಚು ರೂಪಿಸಿದ್ದಾರೆ. ಎರಡು ಬೈಕ್‌ಗಳನ್ನು ಮನೆಯಿಂದ ಸ್ವಲ್ಪ ದೂರದವರೆಗೆ ತಳ್ಳಿಕೊಂಡು ಹೋಗಿದ್ದಾರೆ.
ಆದರೆ, ಎಷ್ಟೇ ಪ್ರಯತ್ನಿಸಿದರೂ ಬೈಕ್ ಸ್ಟಾರ್ಟ್ ಆಗಿಲ್ಲ. ಇದರಿಂದ ಹತಾಶರಾದ ಕಿಡಿಗೇಡಿಗಳು, ಸಿಟ್ಟಿನಲ್ಲಿ ಒಂದು ಬೈಕ್‌ಗೆ ಬೆಂಕಿ ಹಚ್ಚಿ ಸಂಪೂರ್ಣವಾಗಿ ಸುಟ್ಟು ಹಾಕಿದ್ದಾರೆ. ಮತ್ತೊಂದು ಬೈಕನ್ನು ಬೇಲೂರಿನ ವಿಷ್ಣು ಗಾರ್ಡನ್ ಬ್ರಿಡ್ಜ್ (ಸೇತುವೆ) ಮೇಲೆ ಹಾಗೆಯೇ ಬಿಟ್ಟು ಪರಾರಿಯಾಗಿದ್ದಾರೆ.
ಬೆಳಗ್ಗೆ ಎದ್ದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಬೈಕ್ ಮಾಲೀಕರು ಹಾಗೂ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಬೇಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.










