ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆ ತೈಲ ಅಭಾವದ ಆತಂಕ ನಡುವೆ ಪೆಟ್ರೋಲ್, ಡೀಸೆಲ್ ಮಿತ ಬಳಕೆಗೆ ಪ್ರಧಾನಿ ಮೋದಿ ನೀಡಿದ ಸಂದೇಶಕ್ಕೆ ರಾಹುಲ್ ಗಾಂಧಿ ತೀವ್ರ ಟೀಕೆ ಮಾಡಿದ್ದಾರೆ.
ಪೆಟ್ರೋಲ್, ಡೀಸೆಲ್ ಮಿತ ಬಳಕೆಗೆ ಸಂದೇಶ: ಪ್ರಧಾನಿ ಮೋದಿಗೆ ಕುಟುಕಿದ ರಾಹುಲ್ ಗಾಂಧಿ
NewDelhi,ನವದೆಹಲಿ, ಮೇ 11, 2026(www.kannadapost.com): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ತೈಲ ಅಭಾವದ ಸಂಕಷ್ಟ ಎದುರಾಗುವ ಸಾಧ್ಯತೆಗಳ ನಡುವೆಯೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಎಣ್ಣೆಯನ್ನು ಮಿತವಾಗಿ ಬಳಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಂದೇಶ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ಟೀಕೆ ನಡೆಸಿದ್ದು, ಪ್ರಧಾನಿ ಮೋದಿಯವರ ಹೇಳಿಕೆಗಳನ್ನು “ವೈಫಲ್ಯದ ಪುರಾವೆ” ಎಂದು ಕರೆದಿದ್ದಾರೆ.
ಮೂಲಗಳ ಪ್ರಕಾರ, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, “ಇವು ಧರ್ಮೋಪದೇಶಗಳಲ್ಲ, ಸರ್ಕಾರದ ವೈಫಲ್ಯದ ಸಾಕ್ಷಿಗಳು. ಕಳೆದ 12 ವರ್ಷಗಳಲ್ಲಿ ದೇಶವನ್ನು ಈ ಪರಿಸ್ಥಿತಿಗೆ ತಂದಿರುವುದು ಮೋದಿ ಸರ್ಕಾರವೇ” ಎಂದು ಆರೋಪಿಸಿದ್ದಾರೆ.
ಇನ್ನೂ ಮುಂದುವರಿದು, “ಜನರು ಏನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂಬುದನ್ನೇ ಪ್ರಧಾನಿ ಹೇಳುತ್ತಿದ್ದಾರೆ. ಪ್ರತಿ ಬಾರಿ ಮೋದಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ ಮತ್ತು ಅದರ ಹೊರೆ ಜನರ ಮೇಲೆ ಹಾಕುತ್ತಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

“ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ” ಎಂದು ರಾಹುಲ್ ಗಾಂಧಿ ಚಾಟಿ ಬೀಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉಲ್ಬಣವಾಗುತ್ತಿರುವ ಉದ್ವಿಗ್ನತೆಯಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇಂಧನ ಸರಬರಾಜು ಮತ್ತು ಬೆಲೆ ಏರಿಕೆಯ ಆತಂಕ ವ್ಯಕ್ತವಾಗಿದೆ.










