ದಸರಾಗೆ ಸುಲಭ ಸಾರಿಗೆ: 10000 ಬಸ್ ಜೊತೆ: ರಸ್ತೆಗಿಳಿಯಲಿವೆ 350ಹೆಚ್ಚುವರಿ ಬಸ್

ಮೈಸೂರು: ದಸರಾ ಹಬ್ಬಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿಯಾಗಿ ೩೫೦ ಬಸ್‌ಗಳನ್ನು ರಸ್ತೆಗಿಳಿಸಲಾಗುತ್ತಿದೆ.
ಈ ಮೂಲಕ ಮೈಸೂರಿಗೆ ರಾಜ್ಯ ವಿವಿಧೆಡೆ ಯಿಂದ ಸುಲಭವಾಗಿ ಬಸ್‌ಗಳು ಲಭ್ಯವಾಗಲಿವೆ.
ವರ್ಷಕ್ಕೆ ಒಮ್ಮೆ ನಡೆಯುವ ವಿಶ್ವವಿಖ್ಯಾತ ದಸರಾ ಜಂಬು ಸವಾರಿಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಜನ ಮೈಸೂರಿಗೆ ತೆರಳಲು ಮುಂದಾಗುತ್ತಾರೆ. ಅದರಲ್ಲೂ ನವರಾತ್ರಿಯ ಎಲ್ಲಾ ದಿನಗಳಲ್ಲಿಯೂ ಮೈಸೂರು ನಗರದಲ್ಲಿ ವಿವಿಧ ಕಾರ್ಯಕ್ರಮ ಇದ್ದು, ಆ ೯ ದಿನ ಜನರ ಆಗಮನ ನಿರ್ಗಮನ ಹೆಚ್ಚಿರುತ್ತದೆ ಹೀಗಾಗಿ, ಸದ್ಯ ಮೈಸೂರು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ೧೦೦೦ ಬಸ್‌ಗಳ ಜತೆಗೆ ಅ.೧೫ ರಿಂದ ಹೆಚ್ಚುವರಿಯಾಗಿ ೩೫೦ ಬಸ್ ಕಾರ್ಯಾಚರಣೆ ನಡೆಸಲಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಹೆಚ್ಚುವರಿ ಬಸ್:
ಹೆಚ್ಚುವರಿ ಬಸ್‌ಗಳ ಪೈಕಿ ಬಹುತೇಕ ಬಸ್ ಮೈಸೂರು – ಬೆಂಗಳೂರು, ಮೈಸೂರು – ಹಾಸನ, ಮೈಸೂರು – ಚಾಮರಾಜನಗರ, ಮೈಸೂರು – ಕೊಡಗು ಮಾರ್ಗದಲ್ಲಿ ಸಂಚರಿಸಲಿವೆ. ಇನ್ನು ಮೈಸೂರು ಪ್ರವಾಸಿ ಸ್ಥಳಗಳಿಗೆ ಬಸ್ ಸಂಖ್ಯೆ ಹೆಚ್ಚಿಸಲಾಗಿದೆ. ಇನ್ನು ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಹೊಸಪೇಟೆ ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿಯೂ ೧೦ ದಿನಗಳ ಮಟ್ಟಿಗೆ ಮೈಸೂರಿಗೆ ವಿಶೇಷ ಬಸ್ ಓಡಿಸಲಾಗುತ್ತಿದೆ.
ಸದ್ಯ ಕಾರ್ಯನಿರ್ವಹಿಸುತ್ತಿರುವ ೧,೦೦೦ ಕ್ಕೂ ಹೆಚ್ಚಿನ ಬಸ್‌ಗಳ ಜೊತೆಗೆ, ಜನದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚುವರಿ ೩೫೦ ಬಸ್‌ಗಳನ್ನು ಓಡಿಸುತ್ತೇವೆ. ಬೇಡಿಕೆ ಹೆಚ್ಚಾದರೆ ಬೇರೆ ಜಿಲ್ಲೆಗಳ ಡಿಪೋಗಳಿಂದ ಬಸ್ಸುಗಳನ್ನು ತರಬೇಕಾಗಬಹುದು. ದಸರಾ ದಟ್ಟಣೆಯನ್ನು ನಿರ್ವಹಿಸಲು ವಿಭಾಗವು ಸಂಪೂರ್ಣ ಸನ್ನದ್ಧವಾಗಿದೆ ಎಂದು ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶ್ರೀನಿವಾಸ್ ಹೇಳಿದರು.
ಉಚಿತ ಬಸ್ ಹಿನ್ನೆಲೆ
ಬೇಡಿಕೆ ಹೆಚ್ಚಳ ಸಾಧ್ಯತೆ:
ಸದ್ಯ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆ ಜಾರಿ ಮಾಡಿರುವುದರಿಂದ ಮಹಿಳೆಯರ ಪ್ರವಾಸ ಹೆಚ್ಚಳವಾಗಿದೆ. ಸದ್ಯ ಮೈಸೂರು ದಸರಾ ಹಿನ್ನೆಲೆ ಹೆಚ್ಚಿನ ಮಹಿಳೆಯರು ಜಿಲ್ಲೆಗೆ ಪ್ರವಾಸಕ್ಕೆ ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಹೀಗಾಗಿಯೇ, ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮೈಸೂರು ವಿಭಾಗವು ಬೆಂಗಳೂರಿಗೆ ಮಾತ್ರ ಐಷಾರಾಮಿ ಮತ್ತು ಪ್ರೀಮಿಯಂ ಸೇವೆಗಳನ್ನು ಒಳಗೊಂಡAತೆ ನಿತ್ಯ ಸುಮಾರು ೩೦೦ ಟ್ರಿಪ್‌ಗಳನ್ನು ನಡೆಸುತ್ತದೆ.
ಆದರೆ ಮೈಸೂರು ದಸರಾ ವೇಳೆ ಬಸ್ ವೇಳಾಪಟ್ಟಿ ಹೆಚ್ಚಾಗಲಿದೆ. ಪ್ರಯಾಣಿಕರ ದಟ್ಟಣೆ ಅನುಗುಣವಾಗಿ ಟ್ರಿಪ್ ಹೆಚ್ಚಾಗಲಿವೆ. ದಸರಾ ಸಂದರ್ಭದಲ್ಲಿ ನಗರ ಬಸ್ ನಿಲ್ದಾಣವು ಚಾಮುಂಡಿ ಬೆಟ್ಟ ಮತ್ತು ಬೃಂದಾವನ ಉದ್ಯಾನವನಗಳಿಗೆ ಬಸ್ ಸಂಖ್ಯೆ ಹೆಚ್ಚಿಸಲಾಗಿದೆ.
ವಿವಿಧ ಜಿಲ್ಲೆಗಳಲ್ಲಿಯೂ ಬಸ್ ಸಂಖ್ಯೆ ಹೆಚ್ಚಳ
ದಸರಾ ರಜೆ ಆರಂಭವಾಗಿರುವುದರಿAದ ಸದ್ಯ ಕೆಎಸ್‌ಆರ್‌ಟಿಸಿಯು ವಿವಿಧ ಜಿಲ್ಲೆಗಳಲ್ಲಿ ಹೆಚ್ಚುವರಿ ಹಾಗೂ ವಿಶೇಷ ಬಸ್‌ಗಳ ಸಂಚಾರ ಆರಂಭಿಸಿದೆ. ಪ್ರಮುಖವಾಗಿ ಹಾವೇರಿ, ಬೀದರ್, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಸ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿ, ಸಿಬ್ಬಂದಿ ಮಾಹಿತಿ ನೀಡಿದ್ದಾರೆ.