Ramanagara: ವಿಡಿಯೋ: ಅನ್ನವಿಟ್ಟ ವೃದ್ಧೆಯ ಶವದ ಮೇಲೆ ಬಿದ್ದು ರೋಧಿಸಿದ ಮಂಗ: ಅಜ್ಜಿ-ಕೋತಿಯ ಬಾಂಧವ್ಯದ ಹೃದಯಸ್ಪರ್ಶಿ ಕತೆ

Ramanagara|ರಾಮನಗರ:ಮನುಷ್ಯ ಮನುಷ್ಯನ ಸಾವಿಗೇ ಮರುಗದಂತಹ ಕಾಲ ನಡೆಯುತ್ತಿರುವಾಗ ಮೂಕ ವಾನರವೊಂದು ತನಗೆ ಅನ್ನ ಕೊಟ್ಟ ವೃದ್ಧೆಯ ಸಾವಿಗೆ ಮರುಗುತ್ತಾ ಶವದ ಪಕ್ಕ ಕುಳಿತು ರೋಧಿಸಿ, ಶವದ ಮೇಲೆ ಹೊರಳಾಡಿ ವಿದಾಯದ ನಮನ ಹೇಳಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿಯ ವೃದ್ಧೆ 80 ವರ್ಷದ ಪಾರ್ವತಮ್ಮ ಮಂಗಳವಾರ ಕೊನೆಯುಸಿರೆಳೆದರು.

ಅವರು ಮನೆ ಬಳಿ ಬರುತ್ತಿದ್ದ ಕೋತಿಗೆ ತಿಂಡಿ-ತಿನಿಸು ಕೊಟ್ಟು ಉಪಚರಿಸುತ್ತಿದ್ದರು. ಮಂಗ ಅವರ ತೊಡೆಯ ಮೇಲೆ ಕುಳಿತು ಮುದ್ದು ಮಾಡಿಸಿಕೊಂಡು‌ ತೆರಳುತ್ತಿತ್ತು. ಹೀಗೆ ಅಜ್ಜಿಯ ಅತ್ಯಾಪ್ತ ಗೆಳೆಯನೇ ಆಗಿ ಹೋಗಿತ್ತು.

ಮಂಗಳವಾರ ವೃದ್ಧೆ ಸಾವಿನ ಬಳಿಕ ಶವವನ್ನು ಮನೆ ಎದುರು ಅಂತಿಮ ದರ್ಶನಕ್ಕೆ ಇರಿಸಿದ್ದಾಗ ಅದೇ ಕೋತಿ ಮನೆಗೆ ಬಂದು ಮೃತದೇಹದ ಬಳಿ ಕುಳಿತುಕೊಂಡಿದೆ. ಕೆಲ ಸಮಯ ಮೃತದೇಹದ ಮೇಲೆ ಮಲಗಿ ರೋಧಿಸಿದೆ.

ಘಟನೆಯನ್ನು ಕಂಡ ಗ್ರಾಮಸ್ಥರು ಕೋತಿ ಮತ್ತು ವೃದ್ಧೆಯ ನಡುವಿನ ಬಾಂಧವ್ಯ ಕಂಡು ಮರುಗಿದರು.‌ ಮನುಷ್ಯರಲ್ಲಿ ಕೃತಜ್ಞತೆ ಮರೆಯಾಗುತ್ತಿರುವ ದಿನಗಳಲ್ಲಿ ತನಗೆ ಅನ್ನವಿಟ್ಟ ವೃದ್ಧೆಯ ಋಣ ನೆನೆದು ಮಂಗವೊಂದು ದುಃಖಿಸಿರುವುದು ಮೂಕಪ್ರಾಣಿಗಳ ಭಾವನಾ ಪ್ರಪಂಚದ ಬಗ್ಗೆ ಅಚ್ಚರಿಪಡುವಂತೆ ಮಾಡಿದೆ.