ಹಾಸನ Hassan: ಮೆಗಾ ಡೇರಿ ಪ್ರಧಾನಮಂತ್ರಿಯಿಂದ ಉದ್ಘಾಟನೆ-ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ H.D.Devegowda: ಹರದನಹಳ್ಳಿಯಲ್ಲಿ ಶಿವರಾತ್ರಿ ಪೂಜೆ, ಜಾಗರಣೆ

ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಿರುದ್ಯೋಗ, ಹಾಲು ಉತ್ಪಾದನೆ, ಮೆಗಾ ಡೈರಿ, ನೀರಾವರಿ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದರು.

ಹಾಸನ/Hassan, ಫೆ. 14:  ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದ ತಮ್ಮ ಕುಲದೇವರು ದೇವೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ನಿಮಿತ್ತ ವಿಶೇಷ ಪೂಜೆಯಲ್ಲಿ ಪಾಲ್ಗಡ  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ H. D. Deve Gowda ವಿವಿಧ ಸಾರ್ವಜನಿಕ ವಿಚಾರಗಳ ಕುರಿತು ಮಾತನಾಡಿದರು.

ದೇಶದ ಜನತೆಗೆ ಒಳ್ಳೆಯದಾಗಲಿ ಎಂದು ಆಶಿಸಿದ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದೆ. ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ಅಲೆದಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಕೆಲವರಿಗೆ ಭೂಮಿಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಮೆಗಾ ಡೇರಿ ಉದ್ಘಾಟನೆಗೆ ಮೋದಿ:

ಹಾಸನ ಜಿಲ್ಲೆಯಲ್ಲಿ ದಿನಕ್ಕೆ ಸುಮಾರು 12 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಚಿಕ್ಕಮಗಳೂರಿನಿಂದ ಸುಮಾರು 1.5 ಲಕ್ಷ ಲೀಟರ್ ಹಾಗೂ ಕೊಡಗಿನಿಂದ 30 ಸಾವಿರ ಲೀಟರ್ ಹಾಲು ಬರುತ್ತದೆ ಎಂದು ತಿಳಿಸಿದರು. ಹೈನುಗಾರಿಕೆಯಿಂದ ಆರ್ಥಿಕವಾಗಿ ಕೆಲವು ಮಟ್ಟಿನ ಸುಧಾರಣೆ ಕಂಡುಬಂದಿದೆ ಎಂದರು.

ಹಾಸನದಲ್ಲಿ ನಿರ್ಮಾಣಗೊಂಡಿರುವ ಮೆಗಾ ಡೈರಿಗೆ ಕೇಂದ್ರ ಸರ್ಕಾರದಿಂದ 150 ಕೋಟಿ ರೂ. ಅನುದಾನ ದೊರೆತಿದ್ದು, ಶೀಘ್ರದಲ್ಲೇ ಪ್ರಧಾನಮಂತ್ರಿ ಉದ್ಘಾಟನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು. ಈ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ H. D. Revanna, ಎ. ಮಂಜಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಶಿಕ್ಷಣ ಅಭಿವೃದ್ಧಿ

ಹಾಸನ ಜಿಲ್ಲೆಗೆ ಐಐಟಿ ಹೊರತುಪಡಿಸಿ ಬಹುತೇಕ ಎಲ್ಲಾ ರೀತಿಯ ಕಾಲೇಜುಗಳು ಹಾಗೂ ಕೋರ್ಸ್‌ಗಳನ್ನು ತರಲಾಗಿದೆ ಎಂದು ಹೇಳಿದರು. ಶಿಕ್ಷಣ ಮತ್ತು ಡೈರಿ ಕ್ಷೇತ್ರಕ್ಕೆ ವಿಶೇಷ ಮಹತ್ವ ನೀಡಲಾಗಿದೆ ಎಂದು ಉಲ್ಲೇಖಿಸಿದರು.

ನೀರಾವರಿ ಸಮಸ್ಯೆ

ಗೋದಾವರಿ ತಿರುವು ಯೋಜನೆಯಡಿ ತೆಲಂಗಾಣಕ್ಕೆ 47 ಟಿಎಂಸಿ ಹಾಗೂ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ 46 ಟಿಎಂಸಿ ನೀರು ನೀಡಲಾಗುತ್ತಿದೆ. ಮೇಲ್ಭಾಗದಲ್ಲಿರುವ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವ ಅಗತ್ಯವಿದೆ. ನೀರಾವರಿ ವಿಚಾರವಾಗಿ ಇನ್ನೂ ಚರ್ಚೆ ನಡೆಯಬೇಕಿದೆ ಎಂದು ತಿಳಿಸಿದರು.

“ನಮ್ಮ ರಾಜ್ಯಸಭೆ ಅವಧಿ ಇನ್ನೊಂದು ತಿಂಗಳು ಮಾತ್ರ ಇದೆ. ಆದರೆ ನಾನು ಕುಳಿತುಕೊಳ್ಳುವುದಿಲ್ಲ. ದೇವರು ಜ್ಞಾಪನಶಕ್ತಿ ನೀಡಿದ್ದಾನೆ. ಜನರ ಉಪಯೋಗಕ್ಕಾಗಿ ಕೆಲಸ ಮಾಡಬೇಕು,” ಎಂದು ಹೇಳಿದರು.

ದೇಶ ಪುಣ್ಯಭೂಮಿ. ದೇವರು ಎಲ್ಲರಿಗೂ ಸದ್ಬುದ್ದಿ ನೀಡಲಿ ಎಂದು ಅವರು ಪ್ರಾರ್ಥಿಸಿದರು.