ಚನ್ನರಾಯಪಟ್ಟಣ: ಪಟ್ಟಣದ ನವೋದಯ ಸಭಾಂಗಣದಲ್ಲಿ ನವೋದಯ ವಿದ್ಯಾಸಂಘ ಇವರ ಸಹಯೋಗದಲ್ಲಿ ನವೋದಯ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಆಹಾರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲಾ ಕಾಲೇಜು ಓದುವ ವಿದ್ಯಾರ್ಥಿಗಳಲ್ಲಿ ವ್ಯಾಪಾರ ವಹಿವಾಟು, ಹಣದ ಲೆಕ್ಕಾಚಾರ, ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಇನ್ನಿತರೆ ವಿಚಾರಗಳು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಮಕ್ಕಳು ನಾಲ್ಕು ಗೋಡೆಗಳ ಮದ್ಯೆ ಪಾಠ ಪ್ರವಚನಕ್ಕೆ ಸೀಮಿತವಾಗಬಾರದು. ಪ್ರಾಪಂಚಿಕ ಜ್ಞಾನ ಅತಿ ಅಗತ್ಯ, ಹಾಗಾಗಿ ಪಠ್ಯ ಚಟುವಟಿಕೆಗಳ ಜತೆಗೆ ಆಹಾರ ಮೇಳವನ್ನು ಹಮ್ಮಿಕೊಂಡಿದ್ದು ಇದರಿಂದ ಮಕ್ಕಳಿಗೆ ತರಕಾರಿ ಹಾಗೂ ಆಹಾರದ ಬಗ್ಗೆಯೂ ವಿಶೇಷ ಆಸಕ್ತಿ ಮೂಡಲಿದೆ ಎಂದು ತಿಳಿಸಿದರು
ಮಕ್ಕಳಿಗೆ ವ್ಯವಹಾರ ಜ್ಞಾನದ ಜೊತೆಗೆ, ಅಡುಗೆ ಮಾಡುವ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿದೆ. ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಪೋಷಕರು ಅಡುಗೆ ಮಾಡುವಾಗ ಮಕ್ಕಳು ಸಹಾಯ ಮಾಡುವ ಮನೋಭಾವ ಬೆಳೆಯುತ್ತದೆ’
ಮಕ್ಕಳಲ್ಲಿ ಲೆಕ್ಕಾಚಾರ ಹಾಗೂ ಸಾಮಾನ್ಯಜ್ಞಾನದ ಬಗ್ಗೆ ಅರಿವುಮೂಡಿಸಲು ಇದು ಸಹಕಾರಿಯಾಗಿದೆ. ಆಹಾರ ಪದಾರ್ಥಗಳ ತಯಾರಿಕೆ, ಮಾರಾಟ, ಲಾಭ, ನಷ್ಟ, ಆಹಾರ ಪದ್ಧತಿ ಹಾಗೂ ಶುಚಿತ್ವದ ಬಗ್ಗೆ ತಿಳಿವಳಿಕೆ ಮೂಡಿಸಲಿದೆ. ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಕಲಬೆರಕೆ ಸಾರ್ವತ್ರಿಕವಾಗಿದ್ದು, ರುಚಿ ಹೆಚ್ಚಳಕ್ಕೆ ಪೂರಕವಾದ, ವಿಷಕಾರಿ ಅಂಶಗಳಿರುವ, ನಿಷೇಧಿತ ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುವುದು ಒಂದೆಡೆಯಾದರೆ,
ಹೋಟೆಲ್, ಬೀದಿಬದಿಯ ತಿಂಡಿ ಅಂಗಡಿಗಳಲ್ಲಿ ಗ್ರಾಹಕರನ್ನು ಸೆಳೆಯಲು, ಕಲಬೆರಕೆ ನಡೆಯುತ್ತದೆ. ಅದು ಆರೋಗ್ಯಕ್ಕೆ ಮಾರಕ ಎಂಬುದನ್ನರಿತು ಎಚ್ಚೆತ್ತುಕೊಂಡ ಸರ್ಕಾರಗಳು, ಕೆಲವು ನಿಷೇಧಿತ ಪದಾರ್ಥ ಬಳಸದಂತೆ ತಡೆಯಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಜಾರಿಗೆ ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹೋಟೆಲ್‌ಗಳ ಮೇಲೆ ಅಧಿಕಾರಿಗಳು ನಿಗಾ ಇರಿಸಿ, ಕಾನೂನು ಕ್ರಮ ಕೈಗೊಳ್ಳಬೇಕಿದೆ. ಆಹಾರ ಕಲಬೆರಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಹಲವು ಮಾರಕ ಕಾಯಿಲೆಗಳಿಗೆ ಆಹಾರ ಕಲಬೆರಕೆ ಪ್ರಮುಖ ಕಾರಣವಾಗಿದೆ.ಬಹುಪಾಲು ರೋಗಗಳ ಮೂಲಕ ಕಾರಣ ಕಲಬೆರಕೆ ಆಹಾರ ಸೇವನೆ. ಈ ಬಗ್ಗೆ ಜಾಗೃತಿ ವಹಿಸಲು ಮನವಿ ಮಾಡಿದರು.
ಆಹಾರ ಮೇಳದಲ್ಲಿ ಫಾಸ್ಟ್ ಫುಡ್ ತಿನಿಸುಗಳಿಂದ ಮೊದಲುಗೊಂಡು, ವಿವಿಧ ಬಗೆಯ ಹಣ್ಣುಗಳ ಜ್ಯೂಸ್ ಅಂಗಡಿಗಳು, ಮಂಡಾಳು ಒಗ್ಗರಣಿ, ಮಿರ್ಚಿ ಬಜ್ಜಿ, ಬದನೆಕಾಯಿ ಬಜ್ಜಿ, ಗೋಬಿ ಮಂಚೂರಿ, ನೂಡಲ್ಸ್, ಸ್ವೀಟ್ಸ್, ನಾನಾ ಬಗೆಯ ಹಪ್ಪಳ, ಸಂಡಿಗೆ ಸೇರಿದಂತೆ ನಾಡಿನ ನಾನಾ ಭಾಗದಲ್ಲಿನ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಜನರಿಗೆ ಲಭ್ಯವಾಗುವಂತೆ ಆಹಾರ ಮೇಳದಲ್ಲಿ ವ್ಯವಸ್ಥೆ ಗೊಳಿಸಲಾಗಿತ್ತು. ಆಹಾರ ಮೇಳದ ಮಳಿಗೆಗಳಲ್ಲಿ ಮಕ್ಕಳು ತಿಂಡಿ ತಿನಿಸುಗಳಿಗೆ ಮುಗಿಬಿದ್ದು ಸೇವೆವಿಸಿ ಸಂಭ್ರಮಿಸಿದರು.
ತಹಶೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿದರು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ನವೋದಯ ವಿದ್ಯಾಸಂಸ್ಥೆ ಸಂಘದ ಅಧ್ಯಕ್ಷ ಸಿ.ಜೆ ಮಂಜುನಾಥ್, ಗೌರವಾಧ್ಯಕ್ಷ ಸಿ.ಎಸ್.ಶೇಷಶಯನ, ಉಪಾಧ್ಯಕ್ಷ ಡಾ.ಎಸ್.ಪ್ರಮೋದ್, ಕಾರ್ಯದರ್ಶಿ ಕೆ.ಪಿ. ಶರತ್, ಕೋಶಾಧ್ಯಕ್ಷ ಜಲೇಂದ್ರ ಕುಮಾರ್, ನಿರ್ದೇಶಕ ಆನಂದ್ ಕಾಳೇನಹಳ್ಳಿ ಸೇರಿದಂತೆ ಸಂಸ್ಥೆಯ ಬೋಧಕ ಬೋಧಕೆತರರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.










