ಸಕಲೇಶಪುರ: ಫೆಬ್ರವರಿ 2026 : ಕಾಮಗಾರಿಯ ಗುಣಮಟ್ಟವನ್ನು ಕಾಪಾಡಿಕೊಂಡು ನಿಗದಿತ ಅವಧಿಯೊಳಗೆ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಶಾಸಕ ಸಿಮೆಂಟ್ ಮಂಜು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ನಡೆಯುತ್ತಿರುವ ನೂತನ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದ ರಾಜ್ಯ ಹೆದ್ದಾರಿ–112ರ ಬೇಲೂರು–ಸೋಮವಾರಪೇಟೆ ರಸ್ತೆಯನ್ನು ಬಾಳ್ಳುಪೇಟೆಯಿಂದ ಜಮ್ಮನಹಳ್ಳಿ ತನಕ ಸುಮಾರು 3 ಕಿಲೋಮೀಟರ್ ಉದ್ದದಲ್ಲಿ ₹10 ಕೋಟಿ ಅನುದಾನದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಯೋಜನೆಯ ಪ್ರಮುಖ ಅಂಶಗಳು
ಈ ರಸ್ತೆ ಅಭಿವೃದ್ಧಿ ಯೋಜನೆಯಡಿ
7 ಮೀಟರ್ ಅಗಲದ ದ್ವಿಪಥ ರಸ್ತೆ ನಿರ್ಮಾಣ
5 ಮೋರಿಗಳ ನಿರ್ಮಾಣ
ಬಾಳ್ಳುಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಮೋರಿ ಹಾಗೂ ಆಯ್ದ ಭಾಗಗಳಲ್ಲಿ ಚರಂಡಿ ನಿರ್ಮಾಣ
ರಸ್ತೆ ಸುರಕ್ಷತಾ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ
ಎಂದು ಶಾಸಕ ಸಿಮೆಂಟ್ ಮಂಜು ಮಾಹಿತಿ ನೀಡಿದರು.
ಗುಣಮಟ್ಟದ ಬಗ್ಗೆ ಅಸಮಾಧಾನ
ಕಾಮಗಾರಿ ವೀಕ್ಷಣೆ ವೇಳೆ ಕೆಲ ಭಾಗಗಳಲ್ಲಿ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸಿಮೆಂಟ್ ಮಂಜು, ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗುಣಮಟ್ಟದಲ್ಲಿ ಯಾವುದೇ ತಾರತಮ್ಯ ಸಹಿಸದು, ಸಾರ್ವಜನಿಕ ಹಣದ ಯೋಜನೆಗಳನ್ನು ಹೊಣೆಗಾರಿಕೆಯಿಂದ ಅನುಷ್ಠಾನಗೊಳಿಸಬೇಕು ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲಾಖೆಗಳ ಸಮನ್ವಯಕ್ಕೆ ಸೂಚನೆ
ಲೋಕೋಪಯೋಗಿ ಇಲಾಖೆ ಮತ್ತು ಚೆಸ್ಕಾಂ ಇಲಾಖೆಗಳ ನಡುವೆ ಸಮನ್ವಯ ಕೊರತೆ ಕಂಡುಬಂದಿದ್ದು, ಇದು ರಸ್ತೆ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ಶಾಸಕ, ಎರಡೂ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿಕೊಂಡು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮುರುಗೇಶ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಹರೀಶ್, ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.










