ರಾಯಚೂರು : ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕ ಹಣಗಿ ಗ್ರಾಮದಲ್ಲಿ ನಾಲ್ಕು ತಿಂಗಳ ಗರ್ಭಿಣಿ ಸೊಸೆಯನ್ನು ಕತ್ತು ಸೀಳಿ ಹತ್ಯೆಗೈದ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಆರಂಭದಲ್ಲಿ ಈ ಕೃತ್ಯ ಕೌಟುಂಬಿಕ ಕಲಹದ ಪರಿಣಾಮ ಎಂದು ಊಹಿಸಲಾಗಿದ್ದರೂ, ಪೊಲೀಸ್ ತನಿಖೆಯಲ್ಲಿ ಇದರ ಹಿಂದೆ ಆಸ್ತಿ ಲೋಭದ ಅಸಲಿ ಕಾರಣ ಬಹಿರಂಗವಾಗಿದೆ.
ಜನವರಿ 29ರಂದು ಮನೆಗೆ ಬಂದಿದ್ದ ಮಾವ ಸಿದ್ದಪ್ಪ, 24 ವರ್ಷದ ಗರ್ಭಿಣಿ ಸೊಸೆ ರೇಖಾಳ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿನ ಚಕಮಕಿ ತೀವ್ರವಾಗುತ್ತಿದ್ದಂತೆ ಆಕ್ರೋಶಗೊಂಡ ಆತ ಚಾಕುವಿನಿಂದ ರೇಖಾಳ ಕುತ್ತಿಗೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರೇಖಾ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಸಹಾಯ ಕೇಳಿದರೂ, ಹೆಚ್ಚು ರಕ್ತಸ್ರಾವವಾಗಿ ಕೆಲವೇ ಕ್ಷಣಗಳಲ್ಲಿ ಕುಸಿದು ಮೃತಪಟ್ಟಿದ್ದಾಳೆ.
ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಕವಿತಾಳ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು. ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಜಗಳವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದರೂ, ಮುಂದಿನ ವಿಚಾರಣೆಯಲ್ಲಿ ಭೀಕರ ಸತ್ಯ ಹೊರಬಂದಿದೆ.
ಮೃತ ರೇಖಾಳ ತಂದೆ ಮನೆಯ ಆಸ್ತಿಯನ್ನು ತಂದುಕೊಡಬೇಕು ಎಂದು ಸಿದ್ದಪ್ಪ ನಿರಂತರ ಒತ್ತಡ ಹಾಕುತ್ತಿದ್ದನು ಎಂಬುದು ಗೊತ್ತಾಗಿದೆ. ಆಸ್ತಿ ಕೇಳುತ್ತಿಲ್ಲ, ಮನೆ ಹಾಗೂ ಹೊಲದ ಕೆಲಸ ಮಾಡುತ್ತಿಲ್ಲ ಎಂಬ ನೆಪದಲ್ಲಿ ಗರ್ಭಿಣಿಯಾಗಿದ್ದರೂ ಸೊಸೆಯನ್ನು ಹಿಂಸಿಸುತ್ತಿದ್ದನೆಂದು ಆತ ಒಪ್ಪಿಕೊಂಡಿದ್ದಾನೆ.
ಆಸ್ತಿ ವಿಚಾರದಲ್ಲಿ ಉಂಟಾದ ದ್ವೇಷವೇ ಕೊನೆಗೆ ಕ್ರೂರ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.










