ಹಾಸನ: ಜಿಮ್ನಾಸ್ಟಿಕ್ ಹಿರಿಯ ಕ್ರೀಡಾಪಟು ಶ್ರೀನಿವಾಸ ಮೂರ್ತಿಗೆ ಶ್ರದ್ಧಾಂಜಲಿ

ಹಾಸನ: ಈಚೆಗೆ ನಿಧನರಾದ ನಗರದ ಜಿಮ್ನಾಸ್ಟಿಕ್ ಹಿರಿಯ ಕ್ರೀಡಾಪಟು ಶ್ರೀನಿವಾಸ ಮೂರ್ತಿ ಅವರ ಸ್ಮರಣಾರ್ಥವಾಗಿ ಬುಧವಾರ ನಗರದ ಮಹಾರಾಜ ಪಾರ್ಕ್‌ನಲ್ಲಿರುವ ಹೆಲ್ತ್ ಜಿಮ್‌ನಲ್ಲಿ ವಿವಿಧ ಕ್ರೀಡಾ ಸಂಸ್ಥೆಗಳ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.

ಹಾಸನ ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ದಿವಂಗತರ ಸಹಪಾಠಿಗಳಾದ ಶ್ರೀ ಕೈಲಾಸ್ ಶಂಕರ್, ಶ್ರೀ ನಿರಂಜನ್ ರಾಜ್, ಜಿಲ್ಲಾ ಯೋಗ ಸಂಸ್ಥೆಯ ಸಹಕಾರ್ಯದರ್ಶಿ ಶ್ರೀ ಮನೋಹರ ಅವರು ಶ್ರೀನಿವಾಸ ಮೂರ್ತಿ ಅವರ ಕ್ರೀಡಾ ಜೀವನ ಮತ್ತು ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಸಭೆಯಲ್ಲಿ ಬಾಡಿ ಬಿಲ್ಡರ್ ಸಂಸ್ಥೆಯ ಕಾರ್ಯದರ್ಶಿ ಶ್ರೀ ಮೋಹನ್ ಕುಮಾರ್, ವೈಟ್ ಲಿಫ್ಟಿಂಗ್ ಸಂಸ್ಥೆಯ ಕಾರ್ಯದರ್ಶಿ ಶ್ರೀ ಸಚ್ಚಿನ್, ಹೆಲ್ತ್ ಜಿಮ್ ಸದಸ್ಯರಾದ ಪುಟ್ಟೇಗೌಡ, ಶಿವಶಂಕರ್, ಮಹಾಂತೇಶ್, ಭೋಜಪ್ಪ, ಜೆ.ಐ.ನಿರಂಜನ್ ಸೇರಿದಂತೆ ವಿವಿಧ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ದಿವಂಗತ ಶ್ರೀನಿವಾಸ ಮೂರ್ತಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.